ಅಪ್ಪ ಎಲ್ಲಿದ್ದಾರೆ

ಯಶೋದಳು ತನ್ನ ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಶಾಲೆಗೆ ಹೋಗಿರುವಾಗ ಎಂದಿನಂತೆ ಶಾಲೆ ಬಿಟ್ಚೊಡನೆ ಅಮ್ಮನನ್ನು ಕಂಡ ತಕ್ಷಣ ಓಡೋಡಿ ಬರುತ್ತಿದ್ದ ಯಶೋದಳ ಮಗ ಅಂದು ಮಾತ್ರ ಸಪ್ಪೆಮೋರೆ ಹಾಕಿಕೊಂಡು ನಿಧಾನವಾಗಿ ಅಮ್ಮನ ಬಳಿ ಬಂದಾಗ
ಯಶೋದಳಿಗೆ ಗಾಬರಿಯಾಗಿ ಏಕೋ ಪುಟ್ಚಾ ಸಪ್ಪಗಿದ್ದಿ? ಏನಾಯ್ತು ನಿನಗೆ? ಯಾರಾದರೂ ಹೊಡೆದ್ರಾ ಎಂದು ಕೇಳಲು
ಅದೇನೂ ಇಲ್ಲವೆಂದು ಅವಳ ಮಗು ಕೃಷ್ಣ ಉತ್ತರಿಸಿದಾಗ ಮತ್ತೆ ಏಕೆ ಇವತ್ತು ಹೀಗಿದ್ದೀಯಾ ಎಂದು ಪುನಃ ಯಶೋದ ತನ್ನ ಮಗನನ್ನು ಪ್ರಶ್ನಿಸಿದಾಗ
ನನ್ನಪ್ಪ ಎಲ್ಲಿ ಹೋದರು? ಎಂದು ಗಂಭೀರವಾಗಿ ಮಗು ಪ್ರಶ್ನಿಸುತ್ತದೆ. ಮಗುವಿನ ಈ ಅನಿರೀಕ್ಷಿತ ಪ್ರಶ್ನೆಗೆ ಯಶೋದಳು ಸ್ವಲ್ಪ ವಿಚಲಿತಳಾದರೂ, ಅವಳ ಮನಸ್ಸಿನಲ್ಲಿ ಯಾರೋ ಏನೋ ಹೇಳಿಕೊಟ್ಟಿದ್ದಾರೆ ಅದಕ್ಕೆ ಹೀಗೆ ಮಗ ಆಡುತ್ತಿದ್ದಾನೆಂದು ತಿಳಿದುಕೊಂಡು ಮನೆಗೆ ಬಾ ಪುಟ್ಚಾ ಎಲ್ಲವನ್ನೂ ಹೇಳುತ್ತೇನೆಂದು ಮಗುವನ್ನು ಎತ್ತಿಕೊಳ್ಳಲು ಹೋದಾಗ ಮಗು ಊ ಹ್ಞೂಂ ನಾನು ಬರೋಲ್ಲವೆನ್ನುತ್ತದೆ.
ಅಯ್ಯೋ ಇಂದು ನಿನಗೆ ಏನಾಯ್ತಪ್ಪಾ ಬೆಳಿಗ್ಗೆ ಹೋದಾಗ ಚೆನ್ನಾಗಿದ್ದೆ? ಈಗೇಕೆ ಕೋಪ ಬಂದಿದೆ? ಯಾರಾಾದರೂ ಏನಾದರೂ ನಿಮ್ಮಪ್ಪನ ಬಗ್ಗೆ ಅಂದ್ರಾ ಎಂದು ಕೇಳಿದಾಗ ಅದುವರೆಗೂ ತಡೆದುಕೊಂಡಿದ್ದ ಅಳುವಿನ ಕಟ್ಟೆ ಒಡೆದು ಮಗು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದಾಗ
ಯಶೋದಳಿಗೆ ಗಾಬರಿಯಾಗಿ, ಅಯ್ಯೋ ನನ್ನ ಪುಟ್ಟಾ ಏನಾಯ್ತಪ್ಪಾ ನಿನಗೆ ಹೀಗೇಕೆ ಅಳುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ
ಮಗು ಬಿಕ್ಕಿ ಬಿಕ್ಕಿ ಅಳುತ್ತಲೇ ನೀನು ನಮ್ಮಪ್ಪನನ್ನು ಎಲ್ಲಿ ಹೋದರೆಂದು ಹೇಳು ಎಂದ ಮಗುವಿನ ಮಾತಿಗೆ,
ಯಶೋದಳಿಗೂ ತನ್ನ ಗಂಡನ ನೆನಪಾಗಿ ದುಃಖ ಉಮ್ಮಳಿಸಿ ಬರುತ್ತಿದ್ದರೂ ಎಲ್ಲರೆದುರು ಅಳಬಾರದೆಂದು ದುಃಖವನ್ನು ತಡೆದುಕೊಂಡಾಗ ಗಂಟಲು ಉಬ್ಬಿ ಬಂದು ಎರಡು ನಿಮಿಷ ಮಾತನಾಡದೆ ಯಶೋದಳು ಮೌನವಾದಾಗ
ಅಮ್ಮಾ ಏಕೆ ಸುಮ್ಮನಾದೆ ಹೇಳಮ್ಮಾ ಎಂದು ದುಃಖ ಭರಿತ ಧ್ವನಿಯಲ್ಲಿ ಮಗು ಪ್ರಶ್ನಿಸಲು
ಯಾರಿಗೂ ಕಾಣದಂತೆ ಹಿಂದಿರುಗಿ ಕಣ್ಣನ್ನು ಒರೆಸಿಕೊಂಡು ಮಗೂ ಮನೆಗೆ ಬಾ ನಿನಗೆ ಎಲ್ಲವನ್ನೂ ಹೇಳುತ್ತೇನೆಂದರೂ
ಮಗು ತನ್ನ ಹಠವನ್ನು ಬಿಡದೆ ಪದೇ ಪದೇ ಅದೇ ಪ್ರಶ್ನೆಯನ್ನು ಕೇಳುತ್ತಿರುವಾಗ
ಯಶೋದೆಯ ಸಹನೆಯ ಕಟ್ಟೆ ಒಡೆದು ನೀನೀಗ ಮನೆಗೆ ಬರುತ್ತೀಯೋ ಇಲ್ಲವೋ? ಒದೆ ಬೇಕಾ ಎಂದು ಗದರಿದಾಗ
ಹೋಗಮ್ಮಾ ನೀನು ಅಪ್ಪ ಎಲ್ಲಿ ಹೋದರು ಸರಿಯಾಗಿ ಹೇಳಮ್ಮಾ ಎಂದರೆ ಬೈಯ್ಕುತ್ತಿದ್ದೀಯಲ್ಲಾ ? ಎಂದು ಕೇಳಿದಾಗ
ಮನೆಗೆ ಬಂದರೆ ಹೇಳುತ್ತೇನೆ ಎಂದು ಹೇಳಿ ಮಗುವಿಗೆ ಚಾಕ್ಲೇಟ್ ಕೊಡಿಸಿ ಮನೆಗೆ ಕರೆದುಕೊಂಡು ಬರುತ್ತಾಳೆ.
ಯಶೋದಳದ್ದು ಗಂಡ ಮಗುವಿನೊಂದಿಗೆ ಇರುವ ಚಿಕ್ಕ ಸಂಸಾರವಾಗಿದ್ದು, ಸಂತಸಕ್ಕೆ ಕೊರತೆ ಇರುವುದಿಲ್ಲ. ಸುಂದರವಾದ ಜೀವನದಲ್ಲಿ ಬಿರುಗಾಳಿ ಬೀಸಿದಂತೆ, ದುರಾದೃಷ್ಟವಶಾತ್ ಅವಳಗಂಡನಿಗೆ ಮಾರಕ ಖಾಯಿಲೆ ಬಂದು ಅಸು ನೀಗಿದಾಗ ಅವಳ ಮಗುವಿಗಿನ್ನೂ ಎರಡೇ ವರ್ಷವಾಗಿದ್ದು, ಅಪ್ಪ ಮರಣಹೊಂದಿದ ಬಗ್ಗೆ ಅರಿವಿರುವುದಿಲ್ಲ.
ಅಪ್ಪ ಎಲ್ಲಮ್ಮ ಎಂದು ಪ್ರಶ್ನಿಸುತ್ತಿರುವಾಗಲೆಲ್ಲಾ ನಿಮ್ಮಪ್ಪ ಮೇಲಕ್ಕೆ ಹೋಗಿದ್ದಾರೆಂದು ಹೇಳುತ್ತಾ ಮಗು ಜಾಸ್ತಿ ಕೇಳಿದರೆ ಏನಾದರೂ ನೆಪ ಹೇಳಿ ಮಗುವಿನ ಲಕ್ಷ್ಯವನ್ನು ಬೇರೆ ಕಡೆ ತಿರುಗಿಸುತ್ತಿರುತ್ತಾಳೆ
ಆದರೆ ಮಗು ತನ್ನಪ್ಪನ ವಿಚಾರವಾಗಿ, ತನ್ನ ಸ್ನೇಹಿತರೊಂದಿಗೆ ವಿಚಾರ ತಿಳಿಸಲು
ಆ ಮಗುವಿನ ಸ್ನೇಹಿತರು ನಿಮ್ಮಪ್ಪ ಸತ್ತುಹೋಗಿದ್ದಾರೆ ಅವರನ್ನು ನೆಲದಲ್ಲಿ ಹೂತಿಟ್ಟಿದ್ದಾರೆಂದು ಹೇಳಿರುತ್ತಾರೆ.ಆದರೆ ನಮ್ಮಪ್ಪ ಮೇಲೆ ಹೋಗಿದ್ದಾರೆಂದು ಅಮ್ಮ ಹೇಳುತ್ತಿದ್ದಾಳೆ, ಅಮ್ಮನನ್ನೇ ಕೇಳಬೇಕೆಂದುಕೊಂಡು
ಮದ್ಯಾಹ್ನ ಊಟವಾದ ನಂತರ ಮಗು ತನ್ನಮ್ಮನನ್ನು ಅಪ್ಪ ಎಲ್ಲಿದ್ದಾರಮ್ಮಾ? ನನಗೆ ಹೇಳಲೇ ಇಲ್ಲವೆಂದು ಪುನಃ ಕೇಳಿದಾಗ
ಪಾಪೂ ನಿಮ್ಮಪ್ಪ ದೇವರ ಬಳಿ ಹೋಗಿದ್ದಾರೆಂದು ಸಮಾಧಾನ ಮಾಡಿದಾಗ
ಯಾವಾಗ ಬರುತ್ತಾರಮ್ಮಾ ಎಂದು ಮರು ಪ್ರಶ್ನಿಸುತ್ತದೆ
ದೇವರಿಗೆ ನಿಮ್ಮಪ್ಪನನ್ನು ಕಂಡರೆ ಇಷ್ಟವಂತೆ ಅದಕ್ಕೆ ಕಳುಹಿಸುವುದಿಲ್ಲವೆಂದಾಗ
ಅಮ್ಮಾ ನಾವೇ ದೇವರ ಬಳಿ ಹೋದರೆ ಅಪ್ಪ ಸಿಗುತ್ತಾರಲ್ಲಾ ನಾವು ಹೋಗೋಣವಾ ಎಂದು ಕೇಳಲು
ಬೇಡಾ ಮಗೂ ಈಗಲೇ ಆ ಮಾತು ಆಡಬೇಡ ಅದಕ್ಕೂ ಕಾಲ ಬರುತ್ತದೆ. ನೀನಿನ್ನೂ ಚಿಕ್ಕವನು ಓದಿ ದೊಡ್ಡವನಾದ ಮೇಲೆ ನೀನೇ ಯೇಚನೆ ಮಾಡುತ್ತೀಯಾ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.
ಪುನಃ ಮಾರನೇ ದಿನವೂ ಯಶೋದಳು ಮಗುವನ್ನು ಕರೆದುಕೆೊಂಡು ಬರಲು ಶಾಲೆಗೆ ಹೋದಾಗ
ಆ ದಿನವೂ ಮಗು ಅಳುತ್ತಾ ಬಂದು, ಅಮ್ಮಾ ನೀನು ಹೇಳುವುದೆಲ್ಲಾ ಸುಳ್ಳಮ್ಮಾ ನನಗೆ ನೀನು ನಿಜ ಹೇಳಬೇಕಮ್ಮಾ ಎನ್ನಲು
ಏನು ನಿಜ ಹೇಳಬೇಕು ಸರಿಯಾಗಿ ಹೇಳಪ್ಪಾ ಎಂದು ಯಶೋದ ಪ್ರಶ್ನಿಸಿದಾಗ
ಅಮ್ಮಾ ಅಪ್ಪ ದೇವರ ಬಳಿ ಹೇಗೆ ಹೋದರು? ಹೇಳಮ್ಮಾ ಎನ್ನಲು
ಅದು ನಿನಗೆ ಈಗಲೇ ಅರ್ಥವಾಗುವುದಿಲ್ಲಪ್ಪಾ ನೀನು ದೊಡ್ಜವನಾದ ಮೇಲೆ ಎಲ್ಲಾ ತಿಳಿಯುತ್ತದೆಂದು ಹೇಳಿದರೂ ಮಗುವಿಗೆ ಸಮಾಧಾನ ವಾಗುವುದಿಲ್ಲ.
ಇಲ್ಲಮ್ಮಾ ನೀನು ಸುಳ್ಳು ಹೇಳುತ್ತಿದ್ದೀಯಾ ಎಂದೇ ವಾದಿಸುತ್ತದೆ
ತನ್ನಪ್ಪನ ಸಾವಿನ ಬಗ್ಗೆ ದಿನಕ್ಕೊಂದು ಪ್ರಶ್ನೆಯನ್ನು ಕೇಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಯಶೋದಳಿಗೆ ಸಾಕು ಸಾಕಾಗಿ ಹೋಗಿರುತ್ತದೆ.
ಒಂದು ದಿನ ಮಗು ಯಶೋದಳ ಬಳಿ ಬಂದು ಅಮ್ಮ ನೀನು ಸುಳ್ಳು ಹೇಳುತ್ತಿದ್ದೀಯಾ ಈ ದಿನ ತನ್ನಪ್ಪನ ಬಳಿಗೆ ನಾವು ಹೋಗಬೇಕೆಂದು ಅಪ್ಪನನ್ನು ನೋಡಲೇಬೇಕೆಂದು ಹಠ ಹಿಡಿದಾಗ,
ಬೇಡಾ ಪುಟ್ಟಾ ಹಾಗೆಲ್ಲಾ ಹಠ ಮಾಡಬಾರದಪ್ಪಾ ಎಂದು ಎಷ್ಟೇ ಸಮಾಧಾನ ಮಾಡಿದರೂ ಕೂಡಾ ಮಗು ಅಳುತ್ತಲಿದ್ದು, ಏಕೆ ಇಷ್ಟೊಂದು ಹಠ ಮಾಡುತ್ತಿದ್ದೀಯಾ? ಯಾರು ನಿನಗೆ ಏನು ಹೇಳಿದ್ದಾರೆ ಎಂದು ಯಶೋಧಳು ದುಃಖ ಮಿಶ್ರಿತ ಮಾತುಗಳಿಂದ ಕೇಳಿದಾಗ
ಅಮ್ಮಾ ನನ್ನ ಸ್ನೇಹಿತ ಹೇಳಿದ ನಮ್ಮಪ್ಪನನ್ನು ಭೂಮಿಯಲ್ಲಿ ಇಟ್ಟಿದ್ದಾರಂತೆ, ಆದರೆ ನೀನು ಅಪ್ಪ ದೇವರ ಬಳಿ ಹೋದರೆಂದು ಹೇಳುತ್ತಿದ್ದೀಯಾ ಎಂಬ ಮಗುವಿನ ಮಾತಿಗೆ. ಯಶೋದಳು ಮನಸ್ಸಿನಲ್ಲಿ ಅಕಸ್ಮಾತ್ ಈ ವಿಷಯ ಒಪ್ಪಿಕೊಂಡರೆ ಭೂಮಿಯನ್ನು ಅಗೆದು ಅಪ್ಪನನ್ನು ಕರೆದುಕೊಂಡು ಬರೋಣವೆಂದು ಕೇಳಬಹುದೆಂದು, ಪುಟ್ಟಾ ಭೂಮಿಯಲ್ಲಿ ನಿನ್ನಪ್ಪನನ್ನು ಇಟ್ಟಿದ್ದನ್ನು ನಿನ್ನ ಸ್ನೇಹಿತ ನೋಡಿದ್ದಾನಂತಾ ಎಂಬ ಯಶೋದಳ ಪ್ರಶ್ನೆಗೆ
ಅವರಪ್ಪನಿಗೆ ಗೊತ್ತಂತೆ ಎಂದು ಮಗು ಉತ್ತರಿಸಿದಾಗ.
ಯಶೋದ ಎಲ್ಲವೂ ಸುಳ್ಳು ಪುಟ್ಟಾ ಎನ್ನುತ್ತಾಳೆ
ಹಾಗಾದರೆ ಅಪ್ಪ ದೇವರ ಬಳಿ ಹೋಗಿದ್ದನ್ನು ನೀನು ನೋಡಿದೆಯಾ ಎಂದು ಮಗು ಮತ್ತೊಮ್ಮೆ ಪ್ರಶ್ನಿಸಲು
ಯಶೋದ ಹೌದು ಎನ್ನುತ್ತಾಳೆ
ಹೇಗೆ ಹೋದರು ಹೇಳಮ್ಮಾ ಎಂದು ಮಗು ಕೇಳಿದಾಗ
ಪುಟ್ಚಾ ಏರೋಪ್ಲೇನ್ ನಲ್ಲಿ ಹೋದರು ಎನ್ನುತ್ತಾಳೆ.
ಇಲ್ಲಮ್ಮಾ ನೀನು ಸುಳ್ಳು ಹೇಳುತ್ತಿದ್ದೀಯಾ ಏರೋಪ್ಲೇನ್ ನಲ್ಲಿ ಇಲ್ಲಿಂದ ಬೇರೆ ಊರಿಗೆ ಹೋಗಬಹುದು ತುಂಬಾ ಮೇಲೆ ಹೋಗಲು ಆಗುವುದಿಲ್ಲವೆಂದು ನಮ್ಮ ಮಿಸ್ ಹೇಳಿದ್ದಾರೆ ಎನ್ನುತ್ತದೆ
ಯಶೋದಳು ಯಾವ ರೀತಿಯಲ್ಲಿ ಹೇಳಿದರೂ ಮಗು ಒಪ್ಪುವುದೇ ಇಲ್ಲ.
ಇದರಿಂದ ಯಶೋದಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮಗುವನ್ನು ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯದೆ ಕಂಗಾಲಾಗಿರುತ್ತಾಳೆ
ಮಗು ಮಾತ್ರ ತನ್ನಪ್ಪನ ಬಳಿ ಹೋಗಬೇಕು ಎಂಬ ಹಠವನ್ನು ಬಿಡುವುದಿಲ್ಲ.
ಒಂದು ದಿನ ಮಗು ಯಶೋದಳ ಬಳಿ ಬಂದು ಅಮ್ಮಾ ಅಮ್ಮಾ ನಾವು ಅಪ್ಪನ ಬಳಿಗೆ ಮೇಲಕ್ಕೆ ಹೋಗೋಣವೆಂದಾಗ
ಮಗೂ ಇನ್ಮೂ ನಿನ್ನ ಹಠ ಬಿಟ್ಚಿಲ್ಲವಲ್ಲೋ ಎಂದು ಹೇಳಿದರೂ
ಅಮ್ಮಾ ವಿಷ ಕುಡಿದರೆ ಮೇಲೆ ಹೋಗಬಹುದೆಂದು ನನ್ನ ಸ್ನೇಹಿತ ಹೇಳಿದ, ನಾವು ವಿಷ ಕುಡಿದು ಅಪ್ಪನ ಬಳಿ ಹೋಗೋಣವೆಂದ ತಕ್ಷಣ
ಯಶೋದಳು ಮಗುವಿನ ಬಾಯನ್ನು ಮುಚ್ಚಿ ಇನ್ನುಮುಂದೆ ಆರೀತಿ ಹೇಳಬೇಡ ಎನ್ನುತ್ತಾಳೆ
ಹಾಗಾದರೆ ನೀನೇ ವಿಷ ತೆಗೆದುಕೊಂಡು ಬಾರಮ್ಮಾ ಇಬ್ಬರೂ ಕುಡಿದು ಬೇಗ ಅಪ್ಪನ ಬಳಿ ಹೋಗೋಣ ಎಂದು ಹಠ ಮಾಡುತ್ತಾನೆ.
ಹಾಗೆಲ್ಲಾ ಹೇಳಬಾರದಪ್ಪಾ ಎಂದು ಎಷ್ಚು ಹೇಳಿದರೂ ಕೇಳದೆ ನನ್ನ ಸ್ನೇಹಿತನ ಮಾವ ವಿಷ ಕುಡಿದು ಮೇಲೆ ಹೋದರಂತೆ ನಾವೂ ಕೂಡಾ ವಿಷ ಕುಡಿದು ಮೇಲೆ ಹೋಗಿ ಅಪ್ಪನನ್ನು ಮಾತನಾಡಿಸಿ ಬರೋಣವೆಂದಾಗ
ಎಷ್ಟು ಹೇಳಿದರೂ ನೀನು ಕೇಳುತ್ತಿಲ್ಲ ಅಲ್ಲವಾ? ತಾಳು ಮಾಡುತ್ತೇನೆಂದು ಹೇಳಿ ಅಡಿಗೆ ಮನೆಗೆ ಹೋಗಿ ಸೌಟನ್ನು ಸುಮ್ಮನೆ ಒಲೆಯ ಮೇಲಿಟ್ಟು ತಂದು ಇನ್ನೊಂದು ಸಲ ಅಪ್ಪನ ಬಗ್ಗೆ ಕೇಳಿದ್ರೆ ಬರೆ ಹಾಕುತ್ತೇನೆಂದು ಬೆದರಿಸಿದಾಗ
ಏನಮ್ಮಾ ನೀನು ಅಪ್ಪ ಎಲ್ಲಿದ್ದಾರೆಂದು ಕೇಳಿದರೆ ಬರೆ ಹಾಕುತ್ತೀಯಲ್ಲಾ ಎಂದು ಮಗು ಅಳುತ್ತಾ ಕೇಳಲು
ಯಶೋದಳಿಗೆ ತಾಳ್ಮೆ ಇಲ್ಲದಂತಾಗುತ್ತದೆ. ಕೋಪ ತಡೆಯಲಾರದೆ ನಿಮ್ಮಪ್ಪ ಇಲ್ಲಾ ಪುಟ್ಚಾ ಸತ್ತುಹೋದರು ಎಂದು ಹೇಳಿದಾಗ
ಹಾಗೆಂದರೆ ಏನಮ್ಮಾ ಎಂದು ಮುದ್ದಾಗಿ ಕೇಳಿದಾಗ
ಅದನ್ನೇ ದೇವರ ಬಳಿ ಹೋದರೆಂದು ಹೇಳುತ್ತಾರೆಂದರೂ
ಅಮ್ಮಾ ನಾವು ಸತ್ತು ಹೋಗೋಣ ಬೇಗ ಅಪ್ಪನ ಬಳಿ ಹೋಗಬಹುದೆಂದಾಗ,
ಮಗುವಿನ ಬಾಯಿಮುಚ್ಚಿ ಹಾಗೆಲ್ಲಾ ಹೇಳಬಾರದಪ್ಪಾ ಎಂದು ಯಶೋದಳು ಹೇಳಿದರೂ
ಹಾಗಾದರೆ ಅಪ್ಪ ಹೇಗೆ ಮೇಲೆ ಹೋದರು ಹೇಳೆಂದು ಮಗು ಪುನಃ ಕೇಳಿದಾಗ.
ಮಗುವಿನ ಪ್ರಶ್ನೆಗೆ ಯಶೋದಳು ತಬ್ಬಿಬ್ಬುಗೊಂಡು ನಿರುತ್ತರಳಾಗುತ್ತಾಳೆ
ಸ್ವಲ್ಪ ದಿನಗಳ ನಂತರ ವಿದೇಶವು ಮಾನವ ಸಹಿತ ಉಡಾಯಿಸಿದ ಉಪಗ್ರಹವನ್ನು ನೋಡಿ ಅದರಂತೆ ಚಿತ್ರವನ್ನು ರಚಿಸಿಟ್ಟಿರುತ್ತಾಳೆ
ಆ ದಿನ ಸಂಜೆ ಮಗು ಶಾಲೆಯಿಂದ ಮಗು ಬಂದು ಅಮ್ಮಾ ನನ್ನ ಪ್ರಶ್ನೆಗೆ ಉತ್ತರ ಹೇಳಲಿಲ್ಲವೆಂದಾಗ
ಏನಪ್ಪಾ ನಿನ್ನ ಪ್ರಶ್ನೆ ಎಂದು ಯಶೋದ ಮಗುವನ್ನು ಕೇಳಲು.
ಅಪ್ಪ ಎಲ್ಲಿ ಹೋದರೆಂದು ಸರಿಯಾಗಿ ಹೇಳಮ್ಮಾ ಎಂದಾಗ
ಮಗುವನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ, ತಾನು ರಚಿಸಿದ್ದ ಮಾನವ ಸಹಿತ ಉಪಗ್ರಹವನ್ನು ತೋರಿಸಿದಾಗ
ಆ ಮಗು ಆ ಚಿತ್ರವನ್ನು ನೋಡಿದ ತಕ್ಷಣ ಅಮ್ಮಾ ಅಪ್ಪನ ಚಿತ್ರ ಇದರಲ್ಲಿದೆ ಇದರಲ್ಲಿ ಹೇಗೆ ಬಂತೆಂದು ಕೇಳಲು
ನಿಮ್ಮಪ್ಪ ಈ ಮಿಷಿನ್ ನಲ್ಲಿ ಕುಳಿತುಕೊಂಡು ಬಹಳ ದೂರ ಮೇಲೆ ಹೋಗಿದ್ದಾರೆಂದು ಯಶೋದ ಹೇಳಿದ ಮಾತಿಗೆ
ಅಮ್ಮಾ ಇದರಲ್ಲಿ ಕುಳಿತು ನಾವೂ ಮೇಲೆ ಹೋಗೋಣವೆಂದು ಮಗು ಆಸೆಯಿಂದ ಹೇಳುತ್ತದೆ
ಈಗ ನೀನಿನ್ನೂ ಚಿಕ್ಕವನು ದೊಡ್ಡವನಾದ ಮೇಲೆ ನೀನು ಇದರಲ್ಲಿ ಕುಳಿತುಕೊಂಡು ಉಪಗ್ರಹ ಸುತ್ತಿ ಬರಬಹುದೆಂದು ಹೇಳಿದಾಗ.
ಅಪ್ಪ ಯಾವಾಗ ಬರುತ್ತಾರೆಂದು ಮಗು ಮತ್ತೆ ಪ್ರಶ್ನಿಸುತ್ತದೆ
ಅವರು ಬರುವುದು ತುಂಬಾ ವರ್ಷಗಳಾಗುತ್ತದೆ ಆಗ ನೀನು ದೊಡ್ಡವನಾಗಿರುತ್ತೀಯ ಆಗ ಎಲ್ಲವೂ ನಿನಗೆ ತಿಳಿಯುತ್ತದೆಂದು
ಮಗುವಿಗೆ ಸಮಾಧಾನ ಮಾಡಿದಾಗ ಮಗು, ಆಡಲು ಹೋಗುತ್ತದೆ.
(ಮಕ್ಕಳಿಗೆ ಹೆತ್ತವರು ಒಂದು ಹೇಳಿ ಬೇರೆಯವರು ಬೇರೆ ರೀತಿ ಹೇಳಿದರೆ ಮಕ್ಕಳ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ. ಅದನ್ನು ಸರಿಪಡಿಸಲು ಹೆತ್ತವರು ಶತಪ್ರಯತ್ನ ಮಾಡಬೇಕಾಗುತ್ತದೆಯಲ್ಲವೇ?
ಡಾ. ಎನ್. ಮುರಳೀಧರ್ ವಕೀಲರು ಹಾಗೂ ಸಾಹಿತಿ ನೆಲಮಂಗಲ, ಬೆಂಗಳೂರು
(ಮಂಗಲಧರೆ)
9902772278
