ವೆಬ್‌ಸ್ಟೋರೀಸ್

ನಾಥೂರಾಮ್ ವಿನಾಯಕ್ ಗೋಡ್ಸೆ

ಅಧ್ಯಾಯ 1

ಸಂಜೆ ಆರಾಗಿತ್ತು.

ಅವತ್ತು ಜನವರಿ 12, 1948. ಕ್ಲಬ್‌ನಲ್ಲಿ ಆಟವಾಡಿ ಹಿಂತಿರುಗುತ್ತಿದ್ದ ಅಲನ್ ಕ್ಯಾಂಪ್‌ಬೆಲ್ ಜಾನ್ಸನ್ ಒಮ್ಮೆ ಸಹಜವಾಗಿ ತಿರುಗಿ ನೋಡಿದ. ಕಿಟಕಿ ತೆರೆದಿತ್ತು. ಘನತೆವೆತ್ತ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಮಹಾತ್ಮಾ ಗಾಂಧಿ ಆ ಬಂಗಲೆಯ ಕೋಣೆಯಲ್ಲಿ ಮಾತನಾಡುತ್ತ ಕುಳಿತಿದ್ದುದು ಕಾಣಿಸಿತು. ಅಲನ್ ಕ್ಯಾಂಪ್‌ಬೆಲ್ ಜಾನ್ಸನ್, ಗವರ್ನರ್ ಜನರಲ್ಲನ ಪತ್ರಿಕಾ ಕಾರ್ಯದರ್ಶಿ. ಸ್ವತಃ ಗಾಂಧೀಜಿ ಆ ಭೇಟಿಯನ್ನು ಬಯಸಿದ್ದರು. ಹೆಚ್ಚು ಸಮಯವನ್ನೂ ಕೊಟ್ಟಿರಲಿಲ್ಲ. ಮೌಂಟ್ ಬ್ಯಾಟನ್‌ನನ್ನು ಭೇಟಿಯಾಗಬೇಕೆಂದಿದ್ದರು. ಅವತ್ತಿನ ಮಟ್ಟಿಗೆ ಅಲನ್ ಕ್ಯಾಂಪ್‌ಬೆಲ್‌ಗೆ ಅದು ಅಂಥ ಮುಖ್ಯವಾದ ಘಟನೆ ಅಂತೇನೂ ಅನ್ನಿಸಿರಲಿಲ್ಲ.

ಐದು ತಿಂಗಳ ಹಿಂದೆ ಬ್ರಿಟಿಷರ ಆಡಳಿತ ಮುಗಿದಿತ್ತು. ಸಾರ್ವಜನಿಕ ಕಟ್ಟಡಗಳ ನೆತ್ತಿಯಿಂದ ಯೂನಿಯನ್ ಜಾಕ್ ಪತಾಕೆ ನೆಲಕ್ಕಿಳಿದು ಸ್ವತಂತ್ರ ಭಾರತದ ಬಾವುಟ ಪಟಪಟಿಸಿತ್ತು. ಆದರೆ ಬ್ರಿಟಿಷ್ ಪ್ರತಿನಿಧಿಯಾಗಿ, ಅದರ ಪತಾಕೆಗಿಂತ ಹೆಚ್ಚು ನಿಚ್ಚಳವಾಗಿ ಲಾರ್ಡ್ ಮೌಂಟ್ ಬ್ಯಾಟನ್ ಇನ್ನೂ ಭಾರತದಲ್ಲಿಯೇ ಇದ್ದ. ಆಗ್ನೆಯ ಏಷಿಯಾದ ಮಹಾ ದಿಗ್ವಿಜಯವನ್ನ ಮುಗಿಸಿಕೊಂಡೇ ಬಂದಿದ್ದ ಆ ಮಹಾ ದಂಡನಾಯಕ, ಭಾರತದ ಕೊನೆಯ ವೈಸ್‌ರಾಯ್ ಆಗಿ ನೇಮಕಗೊಂಡಿದ್ದ. ಆತನ ಜವಾಬ್ದಾರಿ ದೊಡ್ಡದಿತ್ತು. ಆದಷ್ಟು ಬೇಗ ಮತ್ತು ಆದಷ್ಟೂ ಸ್ವಚ್ಛವಾಗಿ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಆಡಳಿತವನ್ನು ಅಂತ್ಯಗೊಳಿಸುವ ಜವಾಬ್ದಾರಿಯದು. ನಲವತ್ತಾರರ ಹರೆಯದ ಮಹಾನ್ ಸ್ಪುರದ್ರೂಪಿ ಮೌಂಟ್ ಬ್ಯಾಟನ್‌ಗೆ ಸಾಲು ಸಾಲು ಮಿಲಿಟರಿ ದಿಗ್ವಿಜಯಗಳ ಹಿನ್ನೆಲೆಯಿತ್ತು. ದೊಡ್ಡ ಮನೆತನದ ಹಿನ್ನೆಲೆ, ಬ್ರಿಟಿಷ್ ನೌಕಾದಳದ ಅತ್ಯದ್ಭುತ ತರಬೇತಿ, ಅಪಾರವಾದ ದೈಹಿಕ ತಾಕತ್ತು, ಆತ್ಮವಿಶ್ವಾಸ, ದಕ್ಷತೆ-ಎಲ್ಲವೂ ಬೆರೆತ ದೈತ್ಯ ಮೌಂಟ್ ಬ್ಯಾಟನ್. ಆತನಲ್ಲದೆ ಬೇರೆ ಯಾರೂ ಅಂಥದ್ದೊಂದು ಐತಿಹಾಸಿಕ ಕಾರ್ಯ ನಿರ್ವಹಿಸುವುದು ಸಾಧ್ಯವಿರಲಿಲ್ಲ. ವೈಸ್‌ರಾಯ್‌ನ ಹುದ್ದೆಯಲ್ಲಿದ್ದಾಗಲೂ ಆತ ಎಲ್ಲವನ್ನೂ ನಿಯಂತ್ರಿಸುವ ಸರ್ವಶಕ್ತ ಮಹಾ ದಂಡನಾಯಕನಾಗಿದ್ದ.

ತನ್ನ ಕೆಲಸದಲ್ಲಿ ಆತ ಅಪಾರವಾದ ಯಶಸ್ಸು ಮತ್ತು ಅಕ್ಷಮ್ಮ ಸೋಲು ಎರಡನ್ನೂ ಕಂಡಿದ್ದ. ‘ಇದು ನಿಜಕ್ಕೂ ಅಪಾಯಕಾರಿ’ ಅಂತ ನೆಹರೂ ಹೇಳುತ್ತಿದ್ದುದು ಹೌದಾದರೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಗಾಂಧೀಜಿ, ನೆಹರೂ, ಸ್ವಲ್ಪ ಮಟ್ಟಿಗೆ ಪಟೇಲ್ ಮುಂತಾದವರು ಲಾರ್ಡ್ ಮೌಂಟ್ ಬ್ಯಾಟನ್‌ನ ಉತ್ಸಾಹ, ಪ್ರಾಮಾಣಿಕತೆ ಮತ್ತು ಆತನ ಥಳುಕಿಗೆ ಮೊದಲ ಸುತ್ತಿನಲ್ಲೇ ಮಾರು ಹೋಗಿದ್ದರು. ಆದರೆ ಅವತ್ತಿಗೆ ಭಾರತದಲ್ಲಿದ್ದ ಮತ್ತೊಂದು ರಾಜಕೀಯ ಪಕ್ಷವಾದ ಮುಸ್ಲಿಂ ಲೀಗ್‌ನ ನಾಯಕ ಮಹಮ್ಮದ್ ಅಲಿ ಜಿನ್ನಾನ ಪರಮ ಕ್ರೂರ ಹಟಮಾರಿತನದ ಮುಂದೆ ಮೌಂಟ್ ಬ್ಯಾಟನ್ ಸೋತು ಶರಣಾಗಿದ್ದ. ಬ್ರಿಟಿಷರ ಕೈಯಿಂದ ಭಾರತದ ಆಡಳಿತವನ್ನು ಎರಡೂ ರಾಜಕೀಯ ಪಕ್ಷಗಳು ಸೇರಿಕೊಂಡು ಹಸ್ತಾಂತರ ಮಾಡಿಕೊಳ್ಳಬೇಕಿತ್ತು. ಆದರೆ ಆ ವಿಷಯದಲ್ಲಿ ಇಬ್ಬರನ್ನೂ ಒಪ್ಪಿಸುವಲ್ಲಿ ಮೌಂಟ್ ಬ್ಯಾಟನ್ ವಿಫಲನಾಗಿದ್ದ. ಹೀಗಾಗಿ ತನ್ನದೇ ಒಂದು ಸೂತ್ರ ಮಂಡಿಸಿ, ಅದರಂತೆ ಮಾಡುವುದಾಗಿ ಘೋಷಿಸಿದ. ನಿಜ ಹೇಳಬೇಕೆಂದರೆ, ಆ ಸೂತ್ರ ಮೂಲತಃ ಮಹಮ್ಮದ್ ಅಲಿ ಜಿನ್ನಾನ ಸೂತ್ರವಾಗಿತ್ತು: ಭಾರತದ ವಿಭಜನೆ! ಪಾಕಿಸ್ತಾನವೆಂಬ ಹೊಸ ದೇಶದ ಸೃಷ್ಟಿಗೆ ಆತ ಸಮ್ಮತಿಸಿದ್ದ. ಮುಖ್ಯವಾಗಿ ಮುಸ್ಲಿಮರಿದ್ದ ಭಾರತದ ಭಾಗವನ್ನು ಕತ್ತರಿಸಿ ತೆಗೆದು, ಉಳಿದ ಭೂ ಭಾಗವನ್ನು ಭಾರತಕ್ಕೆ ಬಿಟ್ಟುಕೊಟ್ಟಿದ್ದ. ಹಾಗಂತ ಕಾಂಗ್ರೆಸ್ಸಿಗರು ಸಂಪೂರ್ಣವಾಗಿ ಹಿಂದೂ ದೇಶವೇ ನಮ್ಮದಾಗಬೇಕು.

ಅಂತಲೂ ಬಯಸಿರಲಿಲ್ಲ. ಸಿಬ್ಬರು, ಬೌದ್ಧರು, ಜೈನರು, ಕ್ರೈಸ್ತರು, ಮುಸಲ್ಮಾನರು, ಹಿಂದೂಗಳು-ಹೀಗೆ ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಳ್ಳುವಂತಹ ಜಾತ್ಯತೀತ ಮಹಾನ್ ರಾಷ್ಟ್ರ ತಮ್ಮದೆಂದು ಹೆಮ್ಮೆಯಿಂದ ಹೇಳಿಕೊಂಡಿತ್ತು.

ಮುಸಲ್ಮಾನರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹಟ ಹಿಡಿದಿದ್ದರು. ತುಂಡರಿಸಿದ ಭಾರತವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಕಾಂಗ್ರೆಸ್ ನಾಯಕರ ಮುಂದಿತ್ತು. ಮೊದ ಲೊಮ್ಮೆ ಬ್ರಿಟಿಷರು ಈ ಪ್ರಸ್ತಾವನೆಯನ್ನು ಮುಂದಿರಿಸಿದಾಗ ಅದನ್ನು ಇದೇ ಕಾಂಗ್ರೆಸ್ ನಾಯಕರು ಖಡಾಖಂಡಿತವಾಗಿ ತಿರಸ್ಕರಿಸಿದ್ದರು. ಆದರೆ ಈ ಬಾರಿ ಮೌಂಟ್ ಬ್ಯಾಟನ್ ಅವರನ್ನು ಒಪ್ಪಿಸುವಲ್ಲಿ ಸಫಲನಾಗಿದ್ದ. ಮಹಮ್ಮದ್ ಅಲಿ ಜಿನ್ನಾನ ಹಟಮಾರಿತನ ವನ್ನು ಮೌಂಟ್ ಬ್ಯಾಟನ್ನನೇ ಸರಿಪಡಿಸಲಾಗದಿದ್ದಲ್ಲಿ ಮತ್ಯಾರಿಂದಲೂ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ನಾವಿನ್ನು ಅಖಂಡ ಭಾರತದ ಇಚ್ಛೆಯನ್ನು ಕೈ ಬಿಡಬೇಕು ಎಂದು ಕಾಂಗ್ರೆಸ್ ನಾಯಕರು ಒಪ್ಪಿಕೊಂಡಂತಿತ್ತು. ‘ತಲೆ ನೋವು ಕಳೆದುಕೊಳ್ಳುವುದಕ್ಕಾಗಿ ತಲೆ ಕತ್ತರಿಸಲು ಒಪ್ಪಿಕೊಳ್ಳಬೇಕಿದೆ’ ಅಂದಿದ್ದರು ನೆಹರೂ.

ತೀರ್ಪು ಅವರ ಇರಾದೆಗೆ ವಿರುದ್ದವಾಗಿತ್ತು. ಆದ ನ್ಯಾಯಾಧೀಶನ ಪ್ರಾಮಾಣಿಕತೆ ಅವರಿಗೆ ಅದೆಷ್ಟು ಮನದಟ್ಟಾಗಿತ್ತೆಂದರೆ, ತಮ್ಮೆಲ್ಲ ಅಸಮಾಧಾನವನ್ನೂ ಬದಿಗೊತ್ತಿ, ಅವರು ಲಾರ್ಡ್ ಮೌಂಟ್ ಬ್ಯಾಟನ್‌ನನ್ನು ಗೆಳೆಯನಂತೆ, ಹಿತೈಷಿಯಂತೆ ನೋಡುತ್ತಿ ದ್ದರು. ಮಾತುಕತೆ ಮುಂದುವರೆದಂತೆಲ್ಲ ನೆಹರೂ ಮತ್ತು ಮೌಂಟ್ ಬ್ಯಾಟನ್ ಮಧ್ಯೆ ಒಂದು ಅಪರೂಪದ ಗೆಳೆತನ ಬೆಳೆಯಿತು. ಇದು ಮಹಮ್ಮದ್ ಅಲಿ ಜಿನ್ನಾಗೆ ಸಹನೀ ಯವಾಗಲಿಲ್ಲ. ಎಲ್ಲವೂ ತನ್ನಂತೆಯೇ ಆಗಿ, ತನಗೆ ಸಿಕ್ಕ ಬೇಕಾದುದೆಲ್ಲ ಸಿಕ್ಕ ನಂತರವೂ ಆತ ಮೌಂಟ್ ಬ್ಯಾಟನ್‌ನ ಒಂದು ಅಸಹನೀಯ ಅಸಮಾಧಾನ ಮತ್ತು ಸಿಡುಕು ವ್ಯಕ್ತಪಡಿಸುತ್ತಲೇ ಇದ್ದ. ಸಿಕ್ಕ ಯಾವ ಅವಕಾಶವನ್ನೂ ಬಿಟ್ಟುಕೊಡದೆ ಆತ ಸರ್ಕಾರಿ ಗೌರವ ಮರ್ಯಾದೆಗಳನ್ನು ಮುರಿದು ಅವಮಾನಿಸಲೆತ್ನಿಸುತ್ತಿದ್ದ. ಒಮ್ಮೆಯಂತೂ ಅದೆಷ್ಟು ಕೆಟ್ಟ ಪತ್ರ ಬರೆದಿದ್ದನೆಂದರೆ, “ಇಂಥ ಧಾಟಿಯ ಪತ್ರವನ್ನು ನನ್ನ ರಾಜನಿಂದಲೂ ಸ್ವೀಕರಿಸಲಾರೆ. ಒಬ್ಬ ಕೂಲಿಯವನಿಗೂ ಬರೆಯಲಾರೆ” ಎಂದು ಹಿರಿಯ ಅಧಿಕಾರಿ ಲಾರ್ಡ್ ಇಸ್‌ಮೆ, ಕ್ಯಾಂಪ್‌ಬೆಲ್ ಜಾನ್ಸನ್‌ನಿಗೆ ಹೇಳಿದ್ದನಂತೆ. ಆದರೆ ಗಾಂಧಿ, ನೆಹರೂ ಮತ್ತು ಪಟೇಲ್ ತರಹದ ನಾಯಕರಿಗೆ ಮೌಂಟ್ ಬ್ಯಾಟನ್‌ನೊಂದಿಗೆ ಎಷ್ಟೇ ಸಲುಗೆಯಿದ್ದರೂ, ಅವರು ಗೌರವ-ಮರ್ಯಾದೆಗಳನ್ನು ಎಂದೂ ಮುರಿಯುತ್ತಿರಲಿಲ್ಲ. ಮುಂಚೆಯೇ ತಿಳಿಸದೆ, ಅನುಮತಿ ಪಡೆಯದೆ ಎಂದೂ ಆತನಲ್ಲಿಗೆ ಹೋಗುತ್ತಿರಲಿಲ್ಲ.

ಕಾಂಗ್ರೆಸ್ ನಾಯಕರು ಮತ್ತೂ ಒಂದು ಅಚ್ಚರಿಯಂತಹ ಆಘಾತವನ್ನು ಲಾರ್ಡ್ ಮೌಂಟ್‌ ಬ್ಯಾಟನ್‌ನಿಂದ ತೆಪ್ಪಗೆ ಸ್ವೀಕರಿಸಿದ್ದರು. ಭಾರತವನ್ನು ಇಬ್ಬಾಗ ಮಾಡಿ 1948ರ ಜೂನ್‌ ತಿಂಗಳಲ್ಲೆಲ್ಲೋ ಭಾರತೀಯರ ಮತ್ತು ಪಾಕಿಸ್ತಾನೀಯರ ಕೈಗೆ ಒಪ್ಪಿಸುವುದೆಂದು ಮೊದಲು ತೀರ್ಮಾನಿಸಲಾಗಿತ್ತು. ಅಂಥದರಲ್ಲಿ ಇದ್ದಕ್ಕಿದ್ದಂತೆ ಇರಾದೆ ಬದಲಿಸಿ ಒಂದು ವರ್ಷ, ಮೇಲೆ ಎಪ್ಪತ್ತೈದು ದಿನಗಳಿಗೆ ಮುಂಚಿತವಾಗಿಯೇ, ಆಗಸ್ಟ್ 15,1947ರಂದು

ಎರಡೂ ದೇಶಗಳಿಗೆ ಸ್ವಾತಂತ್ರ್ಯ ಕೊಟ್ಟು ಬಿಡುವುದೆಂದು ಲಾರ್ಡ್ ಮೌಂಟ್ ಬ್ಯಾಟನ್ ತೀರ್ಮಾನಿಸಿದ್ದ. ಕಾಂಗ್ರೆಸ್‌ ಅದಕ್ಕೂ ಉಸಿರೆತ್ತಿರಲಿಲ್ಲ.

ಭಯಂಕರ ಬುದ್ಧಿವಂತಿಕೆಯ, ಜಾಣ ಕೆಲಸ ಅದು. ಆ ತನಕ ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಂಗ್ರೆಸ್ ನಾಯಕರನ್ನು ಈ ತೀರ್ಮಾನ ತತ್ತರಗೊಳ್ಳುವಂತೆ ಮಾಡಿತ್ತು. ಅವರೀಗ ಮೊದಲಿನಂತೆ ಅಲ್ಲೆಲ್ಲೋ ದೂರದಲ್ಲಿ ಕುಳಿತು ‘ಬ್ರಿಟಿಷರು ಅದು ಮಾಡಿದರು, ಇದನ್ನು ಮಾಡಲಿಲ್ಲ’ ಅಂತ ಟೀಕಿಸಿ ಕಾಲ ಕಳೆಯುವಂತಿರಲಿಲ್ಲ. ಅಧಿಕಾರವನ್ನು ತಾವೇ ಕೈಗೆತ್ತಿಕೊಳ್ಳಬೇಕಿತ್ತು. ಸ್ವಾತಂತ್ರ್ಯವು ತಂದಿಡಬಹುದಾದ ಸಮಸ್ಯೆಗಳ ನಗ್ನ ಸ್ವರೂಪವನ್ನು ತಾವೇ ಎದುರಿಸಬೇಕಿತ್ತು.

ದೇಶವನ್ನು ಸುಮಾರು ಒಂದೂವರೆ ಶತಮಾನಗಳವರೆಗೆ ಬ್ರಿಟಿಷರು ನಮಗಾಗಿ ಆಳಿದ್ದರು. ಈಗ ನಾವೇ ಆಡಳಿತ ಚುಕ್ಕಾಣಿ ಕೈಗೆತ್ತಿಕೊಳ್ಳಬೇಕು: ಎಲ್ಲಕ್ಕಿಂತ ಮುಖ್ಯವಾಗಿ ದೇಶದ ವಿಭಜನೆಯ ನಂತರ ಜರುಗಲಿರುವ ಮಹಾಘೋರವನ್ನು ಎದುರಿಸಬೇಕು. ಅಲ್ಲಿಯ ತನಕ ‘ದೇಶ ಬಿಟ್ಟು ತೊಲಗಿರಿ’ ಅನ್ನುತ್ತಿದ್ದ ವರು, ತೊಲಗುವ ಪ್ರಕ್ರಿಯೆ ಇಷ್ಟು ಬೇಗ ಜರುಗಲಿದೆಯಾ ಎಂದು ವಿಭ್ರಾಂತಗೊಂಡಂತಿದ್ದರು. ದಾಸ್ಯದಲ್ಲಿದ್ದೆ ವೆಂಬುದು ನಿಜವೇ ಆದರೂ ಇವತ್ತಿನ ತನಕ ದೇಶವನ್ನು ಒಂದು ಬಿಗಿಯಲ್ಲಿ ಇಟ್ಟಿದ್ದಂತಹ ಚೌಕಟ್ಟನ್ನು ಈ ಪರಿ ಅವಸರವಸರವಾಗಿ ಕೆಡುವುತ್ತಿರುವುದರಿಂದ ದೇಶದಲ್ಲಿ ಹುಟ್ಟಿಕೊಳ್ಳಬಹುದಾದ ಹಿಂಸೆ ಮತ್ತು ಅರಾಜಕತೆಯನ್ನು ನಮ್ಮಿಂದ ನಿಯಂತ್ರಿಸುವುದು ಸಾಧ್ಯವೇ? ಹಾಗಂತ ಲಾರ್ಡ್ ಮೌಂಟ್ ಬ್ಯಾಟನ್‌ನನ್ನು ನಮ್ಮ ವಿಧಾನಸಭಾ ಸದಸ್ಯರೊಬ್ಬರು ಗಾಬರಿಗೊಂಡು ಕೇಳಿದ್ದರು. ಇಂಥದೊಂದು ಭಯ ಸಹಜವಿತ್ತು. ಭಾರತವನ್ನು ಇಬ್ಬಾಗ ಮಾಡುವ ಬಗ್ಗೆ ಇತ್ತ ನಾಯಕರು ಚರ್ಚಿಸುತ್ತಿರುವಾಗಲೇ, ಅತ್ತ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ವ್ಯಾಪಕ ಹಿಂಸಾಚಾರದ ಸಿದ್ಧತೆ ಆರಂಭವಾಗಿತ್ತು. ಅಂಥದ್ದೊಂದು ಹಿಂಸಾಚಾರವನ್ನು ಆ ತನಕ ಬ್ರಿಟಿಷರೇ ಎದುರಿಸಿರಲಿಲ್ಲ. ಆದರೆ ಭಾರತೀಯ ನಾಯಕರ ಅಂಥ ಭಯಗಳನ್ನು ಮೌಂಟ್ ಬ್ಯಾಟನ್ ತಳ್ಳಿ ಹಾಕಿದ್ದ. ಯಾವುದೇ ತರಹದ ರಕ್ತಪಾತವಿರುವುದಿಲ್ಲ. ‘ನಾನೊಬ್ಬ ನಾಗರಿಕನಾಗಿ ಅಲ್ಲ: ಒಬ್ಬ ಸೈನಿಕನಾಗಿ ಮಾತನಾಡುತ್ತಿದ್ದೇನೆ’ ಅಂದಿದ್ದ.

ಎಂಥ ಅರ್ಥಹೀನ ಭರವಸೆಯದು! ಭಾರತದ ಮೇಲೆ ಆಕ್ರಮಣ ಮಾಡಿದ ಮಧ್ಯಕಾಲೀನ ದೊರೆಗಳು ಕೂಡ ಎಸಗದ ಹಿಂಸಾಚಾರ, ರಕ್ತಪಾತ ನಡೆದು ಹೋಯಿತಲ್ಲ? ಅಪಾರ ಸಂಖ್ಯೆಯ ಜನರನ್ನು ಈ ದೇಶ ವಿಭಜನೆ ಬೇರು ಸಮೇತ ಕಿತ್ತೊಗೆಯಿತು. ಎರಡೂ ಕಡೆ ಲಕ್ಷಾಂತರ ಜನ ಗುಳೇ ಎದ್ದರು. ಸುಮಾರು ಹನ್ನೆರಡು ಮಿಲಿಯನ್ ಜನರ ಬದುಕನ್ನು ಉಧ್ವಸ್ಥಗೊಳಿಸಿತು. ಪಾಕಿಸ್ತಾನದಿಂದ ಹಿಂದೂಗಳು, ಸಿಬ್ಬರು ಗುಳೇ ಎದ್ದರು. ಇತ್ತ ಭಾರತದಿಂದ ಮುಸಲ್ಮಾನರು ಗುಳೇ ಎದ್ದರು. ತಂತಮ್ಮ ನೆಲೆಗಳಿಂದ ಉಧ್ವಸ್ಥಗೊಂಡ ಜನಸಮೂಹ ಹಾಗೆ ಗುಳೇ ಹೋಗುತ್ತಿದ್ದರೆ, ಆ ಸಾಲುಗಳು ನಿರ್ಗತಿಕರ ಪ್ರವಾಹದಂತೆ ಕಾಣುತ್ತಿದ್ದವು. ಗುಳೇ ಎದ್ದವರು ಸುಮ್ಮನೆ ಹೋಗುತ್ತಿರಲಿಲ್ಲ. ತಾವು ನೋಡಿದ, ಕೇಳಿದ, ಖುದ್ದು ಅನುಭವಿಸಿದ ಭಯಾನಕ ಘಟನೆಗಳ ವಿವರಗಳನ್ನು ತಮ್ಮೊಂದಿಗೆ ಕಹಿನೆನಪುಗಳಾಗಿ ಕೊಂಡೊಯ್ಯುತ್ತಿದ್ದರು. ಅಲ್ಲಿಂದ ತರುತ್ತಿದ್ದರು. ಅವರ ನೋವಿನ ಕರಾಳ ಕಥೆಗಳು ಉಳಿದವರ ಮನಸಿನಲ್ಲಿ ಪ್ರತೀಕಾರದ ಜ್ವಾಲೆ ಧಗಧಗಿಸುವಂತೆ, ದ್ವೇಷ ಉಕ್ಕಿ ಹರಿಯುವಂತೆ ಮಾಡುತ್ತಿದ್ದವು. ಪ್ರತಿಯೊಬ್ಬರೂ ಪ್ರತೀಕಾರದ ಮಾತಾಡುತ್ತಿದ್ದರು.

ಭಾರತದಲ್ಲಿ ಸುಮಾರು ನಲವತ್ತು ಮಿಲಿಯನ್ ಮುಸಲ್ಮಾನರಿದ್ದರು: ಇಲ್ಲೇ ಉಳಿದು ಹೋಗಲು ನಿಶ್ಚಯಿಸಿದವರು. ಅವರಿದ್ದ ಹಳ್ಳಿಗಳಲ್ಲಿ, ಊರು ಪಟ್ಟಣಗಳಲ್ಲಿ ಹಿಂದೂಗಳ ಮತ್ತು ಸಿಬ್ಬರ ದ್ವೇಷಾಗ್ನಿಗೆ

ಅವರೇ ಅತ್ಯಂತ ಸುಲಭದ ಗುರಿಗಳಾಗಿ ಬಿಡುತ್ತಿದ್ದರು. ಅಷ್ಟಾದರೂ, ‘ಭಾರತದಲ್ಲಿ ರಕ್ತಪಾತ ನಡೆಯುವುದಿಲ್ಲ’ ಎಂದು ಲಾರ್ಡ್ ಮೌಂಟ್ ಬ್ಯಾಟನ್ ಕೊಟ್ಟ ಭರವಸೆಗಾಗಿ ಭಾರತೀಯ ಕಾಂಗ್ರೆಸ್ ನಾಯಕರು ಹಾತೊರೆದಿದ್ದರು. ಕಾಂಗ್ರೆಸ್ ನಾಯಕರೆಂದೂ ಅಬ್ಬರಿಸಿ ಮಾತನಾಡಿದವರಲ್ಲ. ಅಧಿಕಾರ ಬಳಸಿದವರಲ್ಲ, ಅನುಭವಿಸಿದವರಲ್ಲ. ಉದ್ದಕ್ಕೂ ಅಹಿಂಸಾ ತತ್ವವನ್ನು ಉಂಡು ಅರಗಿಸಿಕೊಂಡವರು. ಸುತ್ತ ನಡೆಯುತ್ತಿದ್ದ ಘಟನೆಗಳಿಂದ ತತ್ತರಿಸಿ ಹೋಗಿದ್ದರು. ‘ದೇಶದಲ್ಲಿ ರಕ್ತಪಾತವಾಗುವುದಿಲ್ಲ’ ಅಂತ ಲಾರ್ಡ್ ಮೌಂಟ್ ಬ್ಯಾಟನ್ ಒಬ್ಬ ವೃತ್ತಿನಿರತ ‘ಸೈನಿಕನ’ ಧಾಟಿಯಲ್ಲಿ ಅಂದಾಗ ಸಹಜವಾಗಿಯೇ ಅದನ್ನು ಕಾಂಗ್ರೆಸ್ ನಾಯಕರು ನಂಬಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದರೆ, ಲಾರ್ಡ್ ಮೌಂಟ್ ಬ್ಯಾಟನ್ ಸ್ವಾತಂತ್ರ್ಯಾನಂತರವೂ ಭಾರತದಲ್ಲಿ ಇರಬೇಕಿತ್ತು. ವಿಭಜನೆಯ ಪ್ರಕ್ರಿಯೆ ತಕರಾರಿಲ್ಲದೆ ನಡೆದು ಹೋಗುವ ತನಕ ಭಾರತದಲ್ಲೇ ಇರಬೇಕೆಂದು ಅವರು ಆತನನ್ನು ಇನ್ನಿಲ್ಲದಂತೆ ವಿನಂತಿಸಿದ್ದರು.

ಹೀಗಾಗಿ ಮೌಂಟ್ ಬ್ಯಾಟನ್ ಉಳಿದುಕೊಂಡಿದ್ದ. ಭಾರತದ ಮಟ್ಟಿಗೆ ಆತ ಇನ್ನಾದರೂ ಮಹಾ ದಂಡನಾಯಕನಾಗಿ, ಗವರ್ನರ್ ಜನರಲ್ಲನಾಗಿಯೇ ಉಳಿದುಕೊಂಡಿದ್ದ. ಯಾರ ಪರವಾಗಿಯೂ ನಿಲ್ಲದೆ, ಎರಡು ದೇಶಗಳ ಮಧ್ಯೆ ನ್ಯಾಯ ನಿರ್ಣಯ ಮಾಡುವ ‘ಅಂಪೈ‌ರ್’ನ ಸ್ಥಾನವೊಂದನ್ನು ಆತ ತಂತಾನೆ ವಹಿಸಿಕೊಂಡಿದ್ದ. ಆದರೆ ಮಹಮ್ಮದ್ ಅಲಿ ಜಿನ್ನಾ ತನ್ನ ದೇಶದ ಮಟ್ಟಿಗೆ ಯಾವುದೇ ಬ್ರಿಟಿಷ್ ಅಧಿಕಾರಿಯನ್ನು ‘ಮನೆಯ ಹಿರಿಯ’ನನ್ನಾಗಿ ಇಟ್ಟುಕೊಳ್ಳಲು ಒಪ್ಪಿರಲಿಲ್ಲ. ಬದಲಿಗೆ ತಾನೇ ಪಾಕಿಸ್ತಾನದ ಗವರ್ನರ್ ಜನರಲ್ಲ ನಾಗಿದ್ದ. ಆತನಿಗೆ ದೊಡ್ಡ ನೆರವು ದೊರೆಯುತ್ತಿದ್ದುದೆಂದರೆ ಬಹುಕಾಲದಿಂದಲೂ ಆತನ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಹಾಗೂ ವ್ಯಕ್ತಿಗತ ಮಟ್ಟದಲ್ಲಿ ಗೆಳೆಯನಾಗಿದ್ದ ಅಲನ್ ಕ್ಯಾಂಪ್‌ಬೆಲ್ ಜಾನ್ಸನ್ ನಿಂದ. ಮೌಂಟ್ ಬ್ಯಾಟನ್‌ನ ಕಣ್ಣೆದುರು ಕೊನೆಯ ಎಪ್ಪತ್ತೈದು ದಿನಗಳು ಉಳಿದಿದ್ದವು. ಅಷ್ಟರೊಳಗಾಗಿ ಇಂಗ್ಲಿಷ್ ಆಡಳಿತವನ್ನು ಅಂತ್ಯಗೊಳಿಸಿ ಭಾರತದಿಂದ ನಿರ್ಗಮಿಸಬೇಕೆಂದು ಆತ ತಾನಾಗೇ ತೀರ್ಮಾನಿಸಿದ್ದ. ವಿಭಜನೆಯ ನಂತರದ ದಿನಗಳು ಸುಖದ, ಸುಲಭದ ದಿನಗಳಾಗಿರಲಿಲ್ಲ. ಆ ಪ್ರಕ್ರಿಯೆಯೇ ಒಂದು ಕ್ಲಿಷ್ಟತೆಯಿತ್ತು. ವಿಭಜನೆಯ ನಂತರ ನಡೆದುದೆಲ್ಲದಕ್ಕೂ ನಾವು ಮೌಂಟ್ ಬ್ಯಾಟನ್‌ನನ್ನು ಹೊಣೆಗಾರನ ನ್ನಾಗಿ ನಿಲ್ಲಿಸಲಿಕ್ಕೂ ಸಾಧ್ಯವಿಲ್ಲ. ಯಾವುದೇ ಕ್ಷಣದಲ್ಲಿ ಆರಂಭವಾಗಬಹುದಾದ ಮತೀಯ ಘರ್ಷಣೆಯನ್ನು ತಹಬಂದಿಗೆ ತರಲು ಆತ ಭಾರತದ ಬಲಿಷ್ಠ ಸೈನ್ಯ ಮತ್ತು ವಾಯು ಪಡೆಗಳನ್ನು ಬಳಸಬಹುದು ಎಂದು ನಂಬಿದ್ದ. ಅಗತ್ಯಕ್ಕಿಂತ ಹೆಚ್ಚಾಗಿಯೇ ನಂಬಿದ್ದ. ‘ಅತ್ಯಂತ ಉಗ್ರ ಕ್ರಮಗಳನ್ನು ಕೈಗೊಳ್ಳುತ್ತೇನೆ. ಗಲಭೆ ಎಬ್ಬಿಸಲು ಯತ್ನಿಸಿದವರ ವಿರುದ್ಧ ಟ್ಯಾಂಕ್ ಮತ್ತು ಯುದ್ಧವಿಮಾನ ಬಳಸುತ್ತೇನೆ’ ಅಂದಿದ್ದ ಮೌಂಟ್ ಬ್ಯಾಟನ್. ಆತನಿಗೆ ಅರ್ಥವಾಗದೆ ಇದ್ದ ಸಂಗತಿಯೆಂದರೆ ವಿಭಜನೆಯಾಗುತ್ತಿರುವುದು ದೇಶವೊಂದೇ ಅಲ್ಲ: ಸೈನ್ಯವೂ ವಿಭಜಿತಗೊಳ್ಳಲಿದೆ, ಎಂಬುದು.

ಅದು ಆದದ್ದೇ ಹಾಗೆ. ದೇಶ ವಿಭಜನೆಯಾಗುತ್ತಿದ್ದಂತೆಯೇ ಸೈನ್ಯದಲ್ಲಿನ ಮುಸ್ಲಿಂ ರೆಜಿಮೆಂಟುಗಳು ಪಾಕಿಸ್ತಾನದ ಕಡೆಗೆ ಹೋಗಿಬಿಟ್ಟವು. ಉಳಿದಂತೆ ಭಾರತದ ನೌಕಾದಳ ಮತ್ತು ವಾಯುದಳದಲ್ಲಿದ್ದ ಬೆರಳೆಣಿಕೆಯಷ್ಟು ಮುಸ್ಲಿಂ ಅಧಿಕಾರಿಗಳು ಮತ್ತು ಇತರೆ ನೌಕರರು ಕೂಡ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿಬಿಟ್ಟಿದ್ದರು. ಹಿಂದೆ ಯುದ್ಧ ಕಾಲದಲ್ಲಿ ಬಲಿಷ್ಠ ಭಾರತೀಯ ಸೈನ್ಯದ ಮಹಾ ದಂಡನಾಯಕನಾಗಿ ಲಾರ್ಡ್ ಮೌಂಟ್ ಬ್ಯಾಟನ್ ಯಾವ ಸುಸಂಘಟಿತ, ದಕ್ಷ, ಒಮ್ಮನಸ್ಸಿನ, ಶಿಸ್ತಿನ ಸೈನ್ಯವನ್ನು ನೋಡಿ ದ್ದನೋ ಆ ಸೈನ್ಯ ಈಗ ಅಸ್ತಿತ್ವದಲ್ಲಿರಲಿಲ್ಲ. ಹಾಗೆ ಭಾರತದ ಸೇನೆಯಲ್ಲಿ ಸಂಪೂರ್ಣ ಹಿಂದೂ

ರೆಜಿಮೆಂಟುಗಳಿದ್ದವು. ಸಂಪೂರ್ಣ ಸಿಖ್ ರೆಜಿಮೆಂಟುಗಳಿದ್ದವು. ಅದೆಲ್ಲವೂ ಮೊದಲಿನಂತೆಯೇ ಸ್ಥಿರವಾಗಿದ್ದವು. ಆದರೆ ಇಡೀ ದೇಶದಲ್ಲಿ ಮತಭ್ರಾಂತಿ ಯಾವ ಪರಿ ಹುಟ್ಟಿಕೊಂಡಿತ್ತೆಂದರೆ, ಜನ ಸಾಮಾನ್ಯರಲ್ಲಿನ ಮತೀಯ ದ್ವೇಷ ಸೈನಿಕರಲ್ಲೂ ತಲೆದೋರಿಬಿಟ್ಟಿತ್ತು. ಅಥವಾ ಹಾಗೊಂದು ಅನಿಸಿಕೆ ಹುಟ್ಟಿಕೊಂಡಿತ್ತು. ಪಾಕಿಸ್ತಾನಿ ಸೈನಿಕರು ಅಲ್ಲಿಂದ ಗುಳೇ ಎದ್ದು ಬರುತ್ತಿದ್ದ ಸಿಖ್ ಮತ್ತು ಹಿಂದೂ ನಿರಾಶ್ರಿತರ ಮೇಲೆ ಭೀಕರ ಅತ್ಯಾಚಾರಗಳನ್ನೆಸಗುತ್ತಿದ್ದರು. ಆ ವರದಿಗಳು ಬಿಟ್ಟೂ ಬಿಡದೆ ಹಿಂದೂ ಮತ್ತು ಸಿಖ್ ಸೈನಿಕರ ಕಿವಿಯ ಮೇಲೆ ಬೀಳುತ್ತಿದ್ದವು. ಪರಿಸ್ಥಿತಿ ಹೀಗಿರುವಾಗ ಭಾರತದಲ್ಲಿ ಮತೀಯ ಘರ್ಷಣೆ ಆರಂಭವಾದರೆ ಇವರು ಮುಸ್ಲಿಂ ನಿರಾಶ್ರಿತರನ್ನು ರಕ್ಷಿಸಿ ಪಾರು ಮಾಡುತ್ತಾರೆ ಎಂದು ವಿಶ್ವಾಸವಿಡುವಂತಿರಲಿಲ್ಲ.

ಇಷ್ಟಾದರೂ ಮೌಂಟ್ ಬ್ಯಾಟನ್‌ನಂತಹ ದಿಟ್ಟ ಅಧಿಕಾರಿಯ ಕೈಕೆಳಗಿನ ಸೈನ್ಯ ಅದೆಷ್ಟೇ ಮತಭ್ರಾಂತಿಗೆ ಒಳಗಾಗಿದ್ದರೂ, ಇಲ್ಲಿಂದ ಗುಳೇ ಎದ್ದು ಪಾಕಿಸ್ತಾನಕ್ಕೆ ಹೊರಟಿದ್ದ ಮುಸ್ಲಿಮರನ್ನು ಹಿಂದೂಗಳ ಕೈಗೆ ಸಿಕ್ಕು ಹತರಾಗದಂತೆ ತಡೆಯಬಲ್ಲ, ಅವರನ್ನು ಪಾರು ಮಾಡಬಲ್ಲ ಚೈತನ್ಯ ಭಾರತದ ಸೈನ್ಯಕ್ಕೆ ಇದ್ದೇ ಇತ್ತು. ದುರಂತವೆಂದರೆ, ಈ ಸೇನೆಯೂ ದೀರ್ಘ ಕಾಲದ ಮಟ್ಟಿಗೆ ಮೌಂಟ್ ಬ್ಯಾಟನ್ ಕೈಯಲ್ಲಿರಲಿಲ್ಲ. ಬ್ರಿಟಿಷರು ಭಾರತವನ್ನು ಬಿಟ್ಟ ಕೇವಲ ಎರಡು ತಿಂಗಳೊಳಗಾಗಿ ಎರಡೂ ಸ್ವತಂತ್ರ ರಾಷ್ಟ್ರಗಳು ತಮ್ಮ ಮೊದಲ ಕದನ ಆರಂಭಿಸಿದ್ದವು. ಇದ್ದ ಬದ್ದ ಸೈನ್ಯವನ್ನೆಲ್ಲ ಕಾಶ್ಮೀರಕ್ಕೆ ಕಳಿಸಿ, ಅದು ಪಾಕಿಸ್ತಾನದ ಪಾಲಾಗದಂತೆ ತಡೆಯುವ ಪ್ರಸಂಗ ಬಂದು ಬಿಟ್ಟಿತ್ತು. ಅಂಥ ಪರಿಸ್ಥಿತಿಯಲ್ಲಿ ಉತ್ತರ ಮತ್ತು ಪೂರ್ವ ಭಾರತದಲ್ಲಿ ಕಾಳ್ಳಿಚ್ಚಿನಂತೆ ಹರಡತೊಡಗಿದ ಭಯಾನಕ ಮತೀಯ ಹಿಂಸಾಚಾರವನ್ನು ತಡೆಯಲು ಅಕ್ಷರಶಃ ಯಾರೂ ಇರಲಿಲ್ಲ.

ಬ್ರಿಟಿಷ್ ಆಡಳಿತವಿದ್ದಾಗ ಜಮ್ಮು-ಕಾಶ್ಮೀರವನ್ನು ಅರಸನೊಬ್ಬ ಆಳುತ್ತಿದ್ದ. ಅವತ್ತಿನ ಅರಸೊತ್ತಿಗೆಯ ಸಂಸ್ಥಾನಗಳಲ್ಲಿ ಅದೇ ದೊಡ್ಡದು. ಇತ್ತ ಪಂಜಾಬದ ಬರಡು ನೆಲದಿಂದ, ಅತ್ತ ಹಿಮಾಲಯದ ಹೆಪ್ಪುಗಟ್ಟಿದ ಪರ್ವತ ಪ್ರದೇಶಗಳ ತನಕ ಹರಡಿ ನಿಂತ ಎಂಬತ್ನಾಲ್ಕು ಸಾವಿರ ಚದರ ಮೈಲುಗಳ ಸುವಿಶಾಲ ಸಂಸ್ಥಾನವದು. ಹೆಚ್ಚು ಕಡಿಮೆ ಗ್ರೇಟ್ ಬ್ರಿಟನ್‌ನಷ್ಟು ದೊಡ್ಡದು. ಕಾಶ್ಮೀರದ ಉದ್ದಗಲಕ್ಕೂ ಪರ್ವತಗಳೇ ಇದ್ದುದರಿಂದ, ಅಲ್ಲಿಗೆ ರೇಲ್ವೆ ಸಂಪರ್ಕವಿರಲಿಲ್ಲ. ಹೊರ ಜಗತ್ತಿನೊಂದಿಗೆ ಅದಕ್ಕಿದ್ದ ಸಂಪರ್ಕವೆಂದರೆ, ಕೇವಲ ಮೂರು ರಸ್ತೆಗಳು. ಭೌಗೋಳಿಕವಾಗಿ ಅದು ಎಷ್ಟೇ ವಿಸ್ತಾರವಾಗಿರಲಿ, ಪ್ರವಾಸಿಗರ ಪಾಲಿಗೆ ಕಾಶ್ಮೀರವೆಂದರೆ ಶ್ರೀನಗರ್ ಕಣಿವೆಯೊಂದೇ. ಬ್ರಿಟಿಷ್ ಕಾಲದಲ್ಲಿ ಅದು ಕಾಶ್ಮೀರದ ಹೃದಯ ಭಾಗದಲ್ಲಿತ್ತು. ಸುತ್ತ ಪರ್ವತಗಳಿದ್ದುದರಿಂದ ಶ್ರೀನಗರ್ ಕಣಿವೆಯನ್ನು ಅದರ ಮೂರು ದಿಕ್ಕುಗಳಿಂದ ಪ್ರವೇಶಿಸುವುದು ಕಷ್ಟ ಸಾಧ್ಯ. ಉಳಿದಂತೆ ನಾಲ್ಕನೆಯ ದಿಕ್ಕಿಗೆ ಪರ್ವತಗಳಿರಲಿಲ್ಲ. ಅದು ಭಾರತದೆಡೆಗೆ ತೆರೆದುಕೊಂಡ ಭಾಗವಾಗಿದ್ದು, ಇದೀಗ ಪಾಕಿಸ್ತಾನಕ್ಕೆ ಸೇರುವ ಅನಿವಾರ್ಯತೆಗೆ ಒಳಗಾಗಿತ್ತು. ಹೊರ ಜಗತ್ತಿನಿಂದ ಶ್ರೀನಗರ್‌ಗೆ ತಲುಪಿಕೊಳ್ಳಲಿಕ್ಕೆ ಇದ್ದ ಮೂರು ರಸ್ತೆಗಳ ಪೈಕಿ ಎರಡು ಮುಖ್ಯರಸ್ತೆಗಳು ಈ ದಿಕ್ಕಿನಿಂದಲೇ ಹಾಯ್ದು ಹೋಗಿದ್ದವು. ಇನ್ನು ಮೂರನೆಯ ರಸ್ತೆ: ಅದು ಪಕ್ಕಾ ರಸ್ತೆಯೇ ಅಲ್ಲ. ಅವತ್ತಿನ ಕಾಲದ ಮಹಾರಾಜ ತನ್ನ ಬಳಕೆಗೆ ಅಂತ ಮಾಡಿಕೊಂಡಿದ್ದ ಖಾಸಗಿ ರಸ್ತೆ. ಆತ ಬೇಸಿಗೆಗೊಂದು, ಚಳಿಗಾಲಕ್ಕೊಂದು ಪ್ರತ್ಯೇಕ ರಾಜಧಾನಿ ಮಾಡಿಕೊಂಡಿದ್ದು ಶ್ರೀನಗರಕ್ಕೂ ಜಮ್ಮುವಿಗೂ ಮಧ್ಯೆ ಓಡಾಡಲು ಆ ಕಚ್ಚಾರಸ್ತೆ ಬಳಸುತ್ತಿದ್ದ. ಹೆಚ್ಚೆಂದರೆ ಜೀಪು ಓಡಾಡಬಹುದಾದ ಆ ದಾರಿಯೊಂದೇ ಶ್ರೀನಗರ್ ಕಣಿವೆಗೂ-ಭಾರತಕ್ಕೂ

ಮಧ್ಯೆ ಸಂಪರ್ಕ ಕಲ್ಪಿಸುತ್ತಿತ್ತು. ಈ ರಸ್ತೆಯಾದರೂ ವಿಪರೀತ ದುರ್ಗಮವಾದದ್ದು. ಪದೇ ಪದೆ ಅಲ್ಲಿ ನೆಲ ಜರಿಯುತ್ತಿತ್ತು. ಭೂಮಿ ಕುಸಿಯುತ್ತಿತ್ತು. ಅತ್ಯಂತ ಕ್ಲಿಷ್ಟವಾದ ತಿರುವುಗಳಿದ್ದವು. ಒಂದೇ ಸಲಕ್ಕೆ ಎರಡು ವಾಹನಗಳು ಸಾಗಿ ಹೋಗುವುದು ಸಾಧ್ಯವಿರಲಿಲ್ಲ. ಅದೆಲ್ಲಕ್ಕಿಂತ ದೊಡ್ಡ ತೊಂದರೆಯಿದ್ದುದೆಂದರೆ ಡಿಸೆಂಬರಿನಿಂದ ಏಪ್ರಿಲ್ ತಿಂಗಳ ತನಕ ಈ ರಸ್ತೆ ಸಂಪೂರ್ಣವಾಗಿ ಹಿಮಚ್ಛಾದಿತಗೊಂಡು ಯಾವುದೇ ವಾಹನ ಹಾಯ್ದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇಂಥ ದುರ್ಗಮ ರಸ್ತೆಯನ್ನು ಸರಿಪಡಿಸಿ, ಎಲ್ಲ ಋತುಗಳಲ್ಲೂ ಬಳಸಬಹುದಾದಂಥ ರಸ್ತೆಯನ್ನಾಗಿ ಪರಿವರ್ತಿಸುವ ಕಾರ್ಯ 1947ರಲ್ಲೇ ಆರಂಭ ವಾಯಿತು. ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದಲ್ಲಿರುವ ಪರ್ವತವೊಂದರಲ್ಲಿ ಬನ್ನಿಹಾಲ್ ಸುರಂಗವನ್ನು ಕೊರೆಯಲಾಯಿತು. ಅಷ್ಟಾದರೂ ಈ ರಸ್ತೆ ಸಂಪೂರ್ಣಗೊಂಡದ್ದು 1955ರಲ್ಲಿಯೇ!

ಅಂಥ ಕಾಶ್ಮೀರದ ನಾಲ್ಕೂವರೆ ಮಿಲಿಯನ್ ಜನಸಂಖ್ಯೆಯಲ್ಲಿ ಶೇಕಡಾ ಎಪ್ಪತ್ತೇಳರಷ್ಟು ಜನ ಮುಸ್ಲಿಮರಿದ್ದರು. ಉಳಿದವರಲ್ಲಿ ಹಿಂದೂಗಳಿದ್ದರು, ಸಿಬ್ಬರು ಮತ್ತು ಬೌದ್ಧರಿದ್ದರು. ಕಾಶ್ಮೀರದ ಮಹಾರಾಜ ಹಿಂದೂ ಆಗಿದ್ದ. ಅದೇಕೋ ಏನೋ ವಿಭಜನೆಗೆ ಸಂಬಂಧಿಸಿದಂತೆ ಬರೆದ ಎಲ್ಲ ಪುಸ್ತಕಗಳಲ್ಲೂ ಕಾಶ್ಮೀರದ ಮಹಾರಾಜ ಲೆಫ್ಟಿನೆಂಟ್ ಜನರಲ್, ಹಿಸ್ ಹೈನೆಸ್, ಇಂದ್ರ ಮಹೇಂದ್ರ, ಸಿಪಾಹಿಸನತ್ ಶ್ರೀ ಹರಿಸಿಂಗ್‌ರನ್ನು ‘ಕಾಶ್ಮೀರದ ಸಮಸ್ಯೆ’ಯನ್ನು ಸೃಷ್ಟಿಸಿದ ಮೂಲ ಪುರುಷನೆಂದೂ, ಖಳನಾಯಕನೆಂದೂ ಚಿತ್ರಿಸಲಾಗಿದೆ. ಅದರಲ್ಲೂ ಭಾರತೀಯ ಪತ್ರಕರ್ತರು ಮತ್ತು ರಾಜಕಾರಣಿಗಳು ಇನ್ನಿಲ್ಲದಂತೆ ಮಹಾರಾಜನ ಹೆಸರು ಕೆಡಿಸಿದ್ದಾರೆ. ಈ ಕೆಲಸವನ್ನು ಪಾಕಿಸ್ತಾನದವರು ಮಾಡಿದ್ದಿದ್ದರೆ ಮೆಚ್ಚಬಹುದಿತ್ತು. ಆದರೆ ಭಾರತದ ಮಟ್ಟಿಗೆ ಆತನಿಂದ ಆದದ್ದೆಲ್ಲವೂ ಉಪಕಾರವೇ ಆಯಿತು.

ಗಡಿ ರಾಜ್ಯವಾದುದರಿಂದ ಕಾಶ್ಮೀರಕ್ಕೆ ಯಾವ ದೇಶದೊಳಕ್ಕೆ ಲೀನವಾಗಬೇಕು ಎಂಬುದರ ಬಗ್ಗೆ ತೀರ್ಮಾನಿಸಲು ಸ್ವಾತಂತ್ರ್ಯವಿತ್ತು. ಅದರಲ್ಲೂ ಮೌಂಟ್ ಬ್ಯಾಟನ್ ಒಬ್ಬ ವಿದೇಶೀಯನಾಗಿ ನಿಂತು, ಜನರ ಅಭಿಪ್ರಾಯದ ಅನುಸಾರವಾಗಿ ಕಾಶ್ಮೀರವನ್ನು ಎರಡರ ಪೈಕಿ ಒಂದು ರಾಷ್ಟ್ರದಲ್ಲಿ ವಿಲೀನಗೊಳಿಸಿ ಎಂಬುದಾಗಿ ಮಹಾರಾಜನಿಗೆ ಸಲಹೆ ಕೊಟ್ಟಿದ್ದ. ಅಲ್ಲಿನ ಜನಸಂಖ್ಯೆ ಹೆಚ್ಚಾನು ಹೆಚ್ಚು ಮುಸ್ಲಿಮರಿಂದಲೇ ಕೂಡಿದ್ದರಿಂದ, ಸಹಜವಾಗಿಯೇ ಪಾಕಿಸ್ತಾನದೊಳಕ್ಕೆ ಸೇರಿಕೊಳ್ಳಿ ಎಂದು ಹೇಳಿದಂತಿತ್ತು. ಸ್ವಲ್ಪ ದಿನಗಳ ಮಟ್ಟಿಗೆ ಮಹಾರಾಜನೂ ಯೋಚಿಸಿದ: ಎರಡೂ ಕಡೆ ಸೇರಿಕೊಳ್ಳದೆ ಸ್ವತಂತ್ರವಾಗಿದ್ದರೆ ಹೇಗೆ? ಏಷಿಯಾದ ಸ್ವಿಟ್ಸರಂಡ್ ಅನ್ನಿಸಿಕೊಳ್ಳುತ್ತದೆ ಕಾಶ್ಮೀರ. ಆತ ಹಾಗೆ ಯೋಚಿಸುತ್ತಿರುವಾಗಲೇ ‘ಸ್ವತಂತ್ರವಾಗಿ ಉಳಿಯಲು ನಾವು ಬಿಡುವುದಿಲ್ಲ’, ಎಂದು ಭಾರತ ಸರ್ಕಾರ ಗಟ್ಟಿಯಾಗಿಯೇ ಗದರಿಸಿ ಹೇಳಿತು.

ಮಹಾರಾಜಾ ಶ್ರೀ ಹರಿಸಿಂಗ್‌ಗೆ ಆಗ ಐವತ್ತೆರಡು ವರ್ಷ ವಯಸ್ಸು. ಜೀವನ ಪರ್ಯಂತ ಸುಖದ ಬೆನ್ನತ್ತಿದ ಮನುಷ್ಯ, ದೈಹಿಕವಾಗಿಯೂ ಅಂಥ ಬಲಿಷ್ಠನಲ್ಲದ ತೊಪ್ಪೆ. ಅವನು ಹಿಂದುವಾದ್ದರಿಂದ ಕಾಶ್ಮೀರವು ಭಾರತಕ್ಕೆ ಸೇರಲಿ ಎಂದೇ ಅಂತರಾಳದ ಬಯಕೆ ಹೊಂದಿದ್ದ. ಅಕಸ್ಮಾತ್ ತಾನೇನಾದರೂ ಅಂಥದೊಂದು ಮುನ್ಸೂಚನೆ ಕೊಟ್ಟದ್ದೇ ಆದರೆ ಇರುವ ಎರಡು ರಸ್ತೆಗಳನ್ನೂ ಪಾಕಿಸ್ತಾನವು ಮುಚ್ಚಿಹಾಕಿ ಕಾಶ್ಮೀರಿಗಳ ಬದುಕನ್ನು ದುರ್ಭರ ಮಾಡಿ ಹಾಕುತ್ತದೆ ಎಂಬುದು ಆತನಿಗೆ ಗೊತ್ತಿತ್ತು. ಇದ್ದ ಮೂರನೆಯ ರಸ್ತೆ ಭಾರತಕ್ಕೆ ಬಂದು ಸೇರುತ್ತಿತ್ತಾದರೂ ಅದನ್ನು ನಂಬಿಕೊಳ್ಳುವಂತಿರಲಿಲ್ಲ. ಅಂಥ ಸಂದರ್ಭ ಬಂದಾಗ ಲೆಲ್ಲ ಶ್ರೀ ಹರಿಸಿಂಗ್, ಸಮಸ್ಯೆ ಉದ್ಭವವೇ ಆಗಿಲ್ಲವೇನೋ ಎಂಬಂತೆ ನಟಿಸುತ್ತಿದ್ದ. ಆತನ ಅಭ್ಯಾಸವದು. ಈಗಲೂ ಹಾಗೇ ವರ್ತಿಸಿದ್ದ. ತನ್ನ ಪಾಡಿಗೆ ತಾನಿದ್ದ.

ಮಹಮ್ಮದ್ ಅಲಿ ಜಿನ್ನಾ ಸಹಜವಾಗಿಯೇ ಫೂತ್ಕರಿಸತೊಡಗಿದ. ಆದರೆ ನೆಹರೂ ಮತ್ತು ಇತರೆ ಭಾರತೀಯ ನಾಯಕರಿಗೆ ತಕರಾರು ತೆಗೆಯುವ ಕಾರಣಗಳೇ ಇರಲಿಲ್ಲ. ಅವರು ಯಾವಾಗಲೋ ಕಾಶ್ಮೀರ ನಮ್ಮದಲ್ಲ ಅಂತ ತೀರ್ಮಾನಿಸಿಯಾಗಿತ್ತು. ಅಕಸ್ಮಾತ್ ನೀವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವುದಾದರೆ ನಮ್ಮ ತಕರಾರಿಲ್ಲ ಅಂತಲೂ ಶ್ರೀ ಹರಿಸಿಂಗ್‌ನಿಗೆ ತಿಳಿಸಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಕಾಶ್ಮೀರದ ಒಂದು ಬಹುದೊಡ್ಡ ಭಾಗ ತಮ್ಮ ಮಡಿಲಿಗೆ ಬೀಳುವ ಸಂದರ್ಭ ಬಂದೊದಗಿತ್ತು. ನೆಹರೂ ಮತ್ತು ಪಟೇಲರ ಮಾತು ಹಾಗಿರಲಿ, ಹಿಂದೂ ಮಹಾಸಭಾದ ಉಗ್ರನಾಯಕ ಸಾವರ್ಕ‌್ರರಂಥವರು ಕೂಡ ಅಷ್ಟು ಉಪಾಯವಾಗಿ ಕಾಶ್ಮೀರವನ್ನು ಭಾರತಕ್ಕೆ ದಕ್ಕಿಸಿಕೊಳ್ಳುವ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಸಾಧ್ಯವಾಗಿಸಿದವನು ಮಹಮ್ಮದ್ ಅಲಿ ಜಿನ್ನಾ.

ಮಹಾರಾಜಾ ಶ್ರೀ ಹರಿಸಿಂಗ್‌ನಂತೆಯೇ ಆತನೂ ಸುಮ್ಮನೆ ಕುಳಿತು ಬಿಟ್ಟಿದ್ದಿದ್ದರೆ ಕಾಶ್ಮೀರವನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ. ಆದರೆ ಕೊನೆಯ ದಿನಗಳಲ್ಲಿ ಜಿನ್ನಾಗೆ ಹಣಾಹಣೆ (Direct Action) ರಾಜಕಾರಣದ ಮೇಲೆ ವಿಶ್ವಾಸ ಬಂದುಬಿಟ್ಟಿತ್ತು. ಗಾಂಧೀಜಿಯ ಸತ್ಯಾಗ್ರಹಕ್ಕೆ ಸಾಮೂಹಿಕ ನಾಗರಿಕ ಅಸಹಕಾರ ಆಂದೋಲನದ ಸ್ವರೂಪವಿದ್ದರೆ, ಜಿನ್ನಾನ ಹಣಾಹಣಿ ರಾಜಕೀಯಕ್ಕೆ ಸಾಮೂಹಿಕ ಹಿಂಸಾಚಾರದ ಸ್ವರೂಪವಿತ್ತು. ಈ ಹಿಂದಿನ ಗೆಲುವುಗಳಿಂದಾಗಿ ಆತ ನೆತ್ತರ ರುಚಿ ಕಂಡಿದ್ದ. ಗಲಭೆ, ಹಿಂಸಾಚಾರಗಳನ್ನು ಮಾಡಿಸಿಯೇ ಪಾಕಿಸ್ತಾನದ ನಿರ್ಮಾಣ ಮಾಡಿದ್ದ. ಈಗ ಅದೇ ತಂತ್ರವನ್ನು ಕಾಶ್ಮೀರದ ಮಹಾರಾಜನ ವಿರುದ್ಧ ಬಳಸಲು ತೀರ್ಮಾನಿಸಿದ್ದ. ಆದರೆ ಈ ಬಾರಿ ಜಿನ್ನಾನ ತಂತ್ರ ಆತನಿಗೇ ತಿರುಗುಬಾಣವಾಗಿತ್ತು. ನೇರವಾಗಿ ಕಾಶ್ಮೀರದೊಳಕ್ಕೆ ಸೇನೆ ನುಗ್ಗಿಸಲು ಆತನೇ ಕಾರಣನಾಗಿಬಿಟ್ಟ. ಭಾರತಕ್ಕೆ ಅಂಥದ್ದೊಂದು ಅವಕಾಶವನ್ನು ಒದಗಿಸಿಕೊಟ್ಟ.

ಮೊದಲನೆಯದಾಗಿ ಆತ ಪಾಕಿಸ್ತಾನದ ಮೂಲಕ ಹಾಯ್ದು ಕಾಶ್ಮೀರದೊಳಕ್ಕೆ ಹೋಗುತ್ತಿದ್ದ ಎರಡೂ ರಸ್ತೆಗಳನ್ನು ಮುಚ್ಚಿಸಿಬಿಟ್ಟ. ಆ ನಂತರ ಭಯಾನಕ ರೀತಿಯಲ್ಲಿ ಬುಡಕಟ್ಟಿನ ಅನಾಗರಿಕರನ್ನು ಕಾಶ್ಮೀರದ ಮೇಲೆ ದಂಡೆತ್ತಿ ಹೋಗುವಂತೆ ಮಾಡಿದ. ಯಾವಾಗ ಈ ತೆರನಾದ ದಾಳಿಗಳಾಗತೊಡಗಿದವೋ: ‘ಇದು ಅನ್ಯಾಯ’ ಅಂತ ಕಿರುಚಿಕೊಂಡ ಮಹಾರಾಜ. ಅನಾಗರಿಕ ಬುಡಕಟ್ಟಿನ ದಾಳಿಕೋರರಿಂದ ತನ್ನ ರಾಜ್ಯವನ್ನು ರಕ್ಷಿಸಲು ಶ್ರೀ ಹರಿಸಿಂಗ್ ಭಾರತದ ಸೈನ್ಯದ ನೆರವು ಕೇಳಿದ.

ಈಗ ಭಾರತಕ್ಕೆ ಫಜೀತಿಗಿಟ್ಟುಕೊಂಡಿತ್ತು. ಸತತವಾಗಿ ಎರಡು ದಿನದ ತನಕ ಲಾರ್ಡ್ ಮೌಂಟ್ ಬ್ಯಾಟನ್, ನೆಹರೂ ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನು ಕೂಡಿಸಿಕೊಂಡು ಕಾಶ್ಮೀರದೊಳಕ್ಕೆ ಸೈನ್ಯ ಕಳಿಸುವುದು ನಿಜಕ್ಕೂ ಎಷ್ಟು ದೊಡ್ಡ ತಪ್ಪು ಎಂಬುದನ್ನು ಅತ್ಯಂತ ಆವೇಶಪೂರಿತನಾಗಿ ವಿವರಿಸಿದ. ಇವರೂ ಕೇಳಿಸಿಕೊಂಡರು. ಅವರಿವರ ಮಾತೇಕೆ, ಅವತ್ತಿಗಿನ್ನೂ ಭಾರತ ಸರ್ಕಾರದ ಸೇವೆಯಲ್ಲಿದ್ದ, ಭಾರತೀಯ ಸೈನ್ಯದ ಕಮ್ಯಾಂಡರ್-ಇನ್-ಭೀಫ್ ಸರ್ ರಾಬ್ ಲಾಕ್ ಹರ್ಟ್ ಕೂಡ, ಕಾಶ್ಮೀರಕ್ಕೆ ಸೈನ್ಯವನ್ನು ಕಳಿಸುವುದು ಅಪಾಯಕಾರಿ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ. ಅದೊಂದು military risk ಅಂತಲೇ ಹೇಳಿದ್ದ. ಆದರೆ ನೆಹರೂ ಮತ್ತು ಪಟೇಲ್ ಹಟ ಹಿಡಿದಿದ್ದರು. ಅನಿವಾರ್ಯವಾಗಿ ಲಾರ್ಡ್ ಮೌಂಟ್ ಬ್ಯಾಟನ್ ಅದಕ್ಕೆ ಸಮ್ಮತಿಸಿದ್ದ. ಆದರೆ ಸೈನ್ಯ ಕಳಿಸುವುದಕ್ಕೆ ಮುಂಚೆ ಮಹಾರಾಜ ಅಧಿಕೃತವಾಗಿ ಭಾರತಕ್ಕೆ ಕಾಶ್ಮೀರವನ್ನು ಸೇರಿಸಬೇಕು ಮತ್ತು ಅಂತಿಮವಾಗಿ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಬೇಕೋ, ಭಾರತಕ್ಕೆ ಸೇರಬೇಕೋ ಎಂಬುದನ್ನು ಅಲ್ಲಿನ ಪರಿಸ್ಥಿತಿ ಶಾಂತಗೊಂಡ ಮೇಲೆ ಜನರೇ ತೀರ್ಮಾನಿಸಬೇಕು ಎಂಬ ಕರಾರು ಹಾಕಿದ್ದ.

ಇಲ್ಲಿ ಹೊಸ ದಿಲ್ಲಿಯಲ್ಲಿ ನೆಹರೂ ಮತ್ತು ಸಹೋದ್ಯೋಗಿಗಳು ತಮ್ಮವರೇ ಆದ ಗವರ್ನರ್ ಜನರಲ್‌ನನ್ನೂ, ಸೇನಾನಾಯಕನನ್ನೂ ಅಲ್ಲಗಳೆಯುತ್ತ ಕುಳಿತಿದ್ದಾಗ ಅಲ್ಲಿ ಕಾಶ್ಮೀರದಲ್ಲಿ ದಾಳಿಕೋರರು ಅಬೋತಾಬಾದ್‌ನಿಂದ ಹೊರಡುವ ಹೆದ್ದಾರಿಗೆ ನುಗ್ಗಿ ಅದರ ಮೂಲಕ ಕಾಶ್ಮೀರದೊಳಕ್ಕೆ ನಡೆದು ಬರುತ್ತಿದ್ದರು. ಕೇವಲ ಮೂರು ದಿನದೊಳಗಾಗಿ ಅವರು ಮುಜಫರಾಬಾದ್ ಮತ್ತು ಡೋಮೆಲ್‌ಗಳನ್ನು ಆಕ್ರಮಿಸಿಕೊಂಡು ‘ಉಡಿ’ ಪಟ್ಟಣವನ್ನು ಸುಟ್ಟು ಉಧ್ವಸ್ಥಗೊಳಿಸಿದ್ದರು. ಅಕ್ಟೋಬರ್ 26ರ ಹೊತ್ತಿಗೆ ದಾಳಿಕೋರರು ಶ್ರೀನಗರದಿಂದ ಕೇವಲ ಮೂವತ್ತೈದು ಮೈಲಿ ದೂರವಿದ್ದ ಬಾರಾಮುಲ್ಲಾ ತನಕ ಬಂದು ಬಿಟ್ಟಿದ್ದರು. ಬಾರಾಮುಲ್ಲಾ ನಗರವೆಂಬುದು ಬ್ರಿಟಿಷ್ ಕರ್ನಲ್‌ಗಳಿಗೆ, ಅವರ ಪತ್ನಿಯರಿಗೆ ಸ್ವರ್ಗ ಸದೃಶವಾದ ಊರು. ನದಿಯ ಸೊಂಟಕ್ಕೆ ಆತುಕೊಂಡೇ ಇರುವ ಬಾರಾಮುಲ್ಲಾ ತನ್ನ ತೋಟಗಳಿಂದಾಗಿ ಪ್ರಸಿದ್ಧವಾಗಿತ್ತು. ಅಲ್ಲಿನ ಹವಾಮಾನ ಅದ್ಭುತವಾಗಿತ್ತು. ಇಂಗ್ಲಿಷರಿಗಂತೂ ಅದು ಹೇಳಿ ಮಾಡಿಸಿದ ಜಾಗ. ಅಕ್ಟೋಬರ್ 26ರ ತನಕ ಬಾರಾಮುಲ್ಲಾ ಅದೆಲ್ಲವೂ ಆಗಿತ್ತು. ಆದರೆ ಮಾರನೆಯ ಸಂಜೆಯ ಹೊತ್ತಿಗೆ ಇಡೀ ಊರಿಗೆ ಊರೇ ಉಧ್ವಸ್ಥ ಶಿಥಿಲ! ಅಲ್ಲಿದ್ದ ಹದಿನಾಲ್ಕು ಸಾವಿರ ಜನಸಂಖ್ಯೆಯ ಪೈಕಿ ಹನ್ನೊಂದು ಸಾವಿರ ಜನರನ್ನು ಕತ್ತರಿಸಿ ಹಾಕಲಾಗಿತ್ತು. ಒಂದು ಚರ್ಚು, ನನ್‌ಗಳ ಕಾನ್ವೆಂಟು ಮತ್ತು ಕ್ರಿಶ್ಚಿಯನ್ ಆಸ್ಪತ್ರೆಗಳನ್ನು ಸುಟ್ಟು ಹಾಕಲಾಗಿತ್ತು. ರಜೆ ಕಳೆಯಲೆಂದು ಹೋಗಿದ್ದ ಬ್ರಿಟಿಷ್ ಅಧಿಕಾರಿ ಯೊಬ್ಬನ ಪತ್ನಿಯನ್ನು ಆತನ ಎದುರಿನಲ್ಲೇ ಸಾಮೂಹಿಕವಾಗಿ ಮಾನಭಂಗಕ್ಕೆ ಒಳಪಡಿಸಿ, ಆ ನಂತರ ಆತನನ್ನು ಕೊಂದು ಹಾಕಲಾಗಿತ್ತು. ಬಾರಾಮುಲ್ಲಾದ ಪ್ರಮುಖ ವೃತ್ತವೊಂದರಲ್ಲಿ ಒಬ್ಬ ಮುಸ್ಲಿಂ ಯುವಕನನ್ನು ಶಿಲುಬೆಯೊಂದಕ್ಕೆ ಕಟ್ಟಿ ಮೊಳೆ ಹೊಡೆದಿದ್ದರು.

ಅದೇ ಅಕ್ಟೋಬ‌ರ್ 26ರ ಸಂಜೆಯೇ ಮಹಾರಾಜಾ ಶ್ರೀ ಹರಿಸಿಂಗ್ ಕಾಶ್ಮೀರವನ್ನು ತಾನು ಭಾರತ ‘ದೊಳಕ್ಕೆ ವಿಲೀನಗೊಳಿಸುತ್ತಿರುವುದಾಗಿ ಘೋಷಿಸಿದ್ದ. ಅದರ ಮರುದಿನವೇ ಭಾರತೀಯ ಯುದ್ದ ವಿಮಾನಗಳು ಸೈನಿಕರನ್ನು ತಂದು ಶ್ರೀನಗರ ಕಣಿವೆಯೊಳಗಿಳಿಸಿದವು. ಸಂಜೆ ಹೊತ್ತಿಗೆಲ್ಲ ಭಾರತೀಯ ಸೈನಿಕರು ದಾಳಿಕೋರರ ಮೇಲೆ ಹನನ ಆರಂಭಿಸಿದ್ದರು. ಭಾರತದ ಕೈ ಮೇಲಾಗುತ್ತ ಬಂದಂತೆ ಪಾಕಿಸ್ತಾನದ ‘ಬುಡಕಟ್ಟು ದಾಳಿಕೋರ’ರು ತಂದಿರುವುದು ಪಕ್ಕಾ ಮಿಲಿಟರಿ ಬಳಕೆಯ ಆಯುಧಗಳು ಎಂಬುದು ಋಜುವಾಗತೊಡಗಿತು. ಅವರನ್ನು ಕಾಶ್ಮೀರದ ಗಡಿಗಳ ತನಕ ಪಾಕಿಸ್ತಾನಿ ಮಿಲಿಟರಿ ವಾಹನಗಳು ತಂದು ಬಿಟ್ಟು ಹೋಗುತ್ತಿದ್ದವು. ಅವರ ನಿಗೂಢ ನಾಯಕ ಜೆಬೆಲ್ ತಾರಿಕ್ ಬೇರೆ ಯಾರೂ ಅಲ್ಲ, ಪಾಕಿಸ್ತಾನದ ಪ್ರಖ್ಯಾತ ಜನರಲ್‌ಗಳಲ್ಲಿ ಒಬ್ಬನಾದ ಅಕಬರ್ ಖಾನ್ ಎಂಬುದು ಖಾತರಿಯಾಯಿತು. 1949ರಲ್ಲಿ ಅಕಬರ್ ಖಾನ್ ಪಾಕಿಸ್ತಾನ್ ಸೈನ್ಯದ ಮಹಾ ದಂಡನಾಯಕನಾಗಿ ಆಯ್ಕೆಯಾದ. ಆದರೆ 1950ರಲ್ಲಿ ಮಿಲಿಟರಿ ಕ್ರಾಂತಿ ಉಂಟು ಮಾಡಿ ವಿದ್ರೋಹವೆಸಗಿದ ಆಪಾದನೆಯ ಮೇಲೆ ಆತನನ್ನು ಬಂಧಿಸಲಾಯಿತು. ಆಕಸ್ಮಾತ್ ಭಾರತೀಯ ನಾಯಕರನ್ನು ಆ ಎರಡು ದಿನಗಳ ಮಟ್ಟಿಗೆ ಲಾರ್ಡ್ ಮೌಂಟ್ ಬ್ಯಾಟನ್ ತಡೆಯದೆ ಹೋಗಿದ್ದಿದ್ದರೆ ಪಾಕಿಸ್ತಾನದ ಈ ‘ಬುಡಕಟ್ಟು’ ಸೇನೆ ಉಡಿ ಪಟ್ಟಣ ದಾಟಿ ಬರಲು ಸಾಧ್ಯವೇ ಇರಲಿಲ್ಲ. ಬಾರಾಮುಲ್ಲಾ ಎಂಬ ಮುದ್ದಾದ ನಗರದ ಮಾನಭಂಗ ಆಗುತ್ತಿರಲಿಲ್ಲ.

ಬಾರಾಮುಲ್ಲಾದ ಮೇಲೆ ಆದ ದಾಳಿ ಅಂಥ ಮೌಂಟ್ ಬ್ಯಾಟನ್‌ನನ್ನೇ ಧೃತಿಗೆಡಿಸಿತ್ತು. ಹಿಂದೆ ಚಿಂಗೀಸ್‌ಖಾನ್ ಮಾಡಿದುದನ್ನು ಈಗ ಜಿನ್ನಾ ಮಾಡುತ್ತಿದ್ದಾನೆ ಅನ್ನಿಸಿತು. ಅವತ್ತಿನ ತನಕ ಯಾವ ಕಡೆಗೂ

ಸೇರದೆ ಮೂರನೆಯವನಾಗಿಯೇ ನಿಂತು ಎಲ್ಲವನ್ನೂ ನೋಡುತ್ತಿದ್ದ ಆತ, ಈಗ ನೆಹರೂ ಮತ್ತು ಪಟೇಲ್ ಮಾಡುತ್ತಿದ್ದ ಪ್ರಯತ್ನಗಳನ್ನು ಹೆಚ್ಚು ಅನುಕಂಪದಿಂದ ನೋಡತೊಡಗಿದ. ಹಾಗೆ ಭಾರತ ಸೇನೆ ಕಳಿಸದೆ ಹೋಗಿದ್ದಿದ್ದರೆ ಶ್ರೀನಗರ್ ಉಳಿಯುತ್ತಿರಲಿಲ್ಲ. ನಿರ್ದಯಿ ದಾಳಿಕೋರರು ಶ್ರೀನಗರ್‌ನಲ್ಲಿದ್ದ ನೂರಿನ್ನೂರು ಬ್ರಿಟಿಷ್ ಪ್ರಜೆಗಳನ್ನು ಕೊಂದು ಹಾಕುತ್ತಿದ್ದರು ಎಂಬುದಾಗಿ ‘ದಿ ಸ್ಟೇಟ್ಸ್ಮನ್’ ಪತ್ರಿಕೆಯ ಸಂಪಾದಕ ಇಯಾನ್ ಸ್ಟೀಫನ್ಸ್‌ಗೆ ಮೌಂಟ್ ಬ್ಯಾಟನ್ ಹೇಳಿಕೆ ನೀಡಿದ್ದ.

ಕಾಶ್ಮೀರಕ್ಕೆ ಸೈನ್ಯ ಕಳಿಸಿದರೆ ಅನಾಹುತಗಳೇ ಆದಾವು ಎಂದು ಎಚ್ಚರಿಸಿದ್ದನಲ್ಲ ಸೇನಾನಿ ಲಾಕ್ ಹರ್ಟ್ ಆತನ ಅಭಿಪ್ರಾಯ ಸುಳ್ಳಾಗಿತ್ತು. ಉತ್ತೇಕ್ಷೆಯಿಂದ ಕೂಡಿತ್ತು. ಎಲ್ಲೋ ಒಂದು ಕಡೆ ಜಿನ್ನಾನನ್ನು ಬೆಂಬಲಿಸುತ್ತಿದ್ದಾನಾ? ಕಾಶ್ಮೀರದಲ್ಲಿ ಜಿನ್ನಾನ ಅನಾಚಾರ ನಡೆಯುವುದಕ್ಕೆ ಅನುವು ಮಾಡಿಕೊಡಲೆಂದೇ ಭಾರತೀಯ ನಾಯಕರ ದಿಕ್ಕು ತಪ್ಪಿಸುತ್ತಿದ್ದಾನಾ? ಕಾಶ್ಮೀರದ ಮೇಲೆ ಪಾಕಿ ಆಕ್ರಮಣಕಾರರು ದಾಳಿ ಮಾಡುವ ಸಂಗತಿ ಈತನಿಗೆ ಮೊದಲೇ ಗೊತ್ತಿತ್ತಾ? ಅದನ್ನು ಈತ ಮುಚ್ಚಿಟ್ಟಿದ್ದನಾ ಎಂಬಂಥ ಅನುಮಾನಗಳು ಭಾರತೀಯರಲ್ಲಿ ಹುಟ್ಟಿಕೊಂಡವು. ಅದರ ಸತ್ಯಾಸತ್ಯತೆ ಏನೇ ಇರಲಿ. ಭಾರತದ ಸೇನಾ ನಾಯಕನಾಗಿ ಆತ ನಾಲ್ಕು ವರ್ಷ ಸೇವೆ ಸಲ್ಲಿಸಬೇಕೆಂಬ ಒಪ್ಪಂದವಿತ್ತಲ್ಲ? ಅದನ್ನು ನಾಲ್ವೇ ತಿಂಗಳಿಗೆ ಮುರಿದು, ಭಾರತೀಯ ನಾಯಕರು ಲಾಕ್‌ ಹರ್ಟ್‌ನನ್ನು ವಾಪಸು ಕಳಿಸಿದರು. ಹಾಗೆ ಉದ್ಭವವಾಯಿತು, ಕಾಶ್ಮೀರದ ಸಮಸ್ಯೆ. ಅದು ಹಪಹಪಿಯ ಸಂತಾನ. ಇವತ್ತಿಗೂ ಬದುಕಿದೆ.

ಮೌಂಟ್ ಬ್ಯಾಟನ್‌ನ ಮಾತು ಕೇಳಿ ಅದರಂತೆ ಶ್ರೀ ಹರಿ ಸಿಂಗ್ ನಡೆದುಕೊಂಡು ಬಿಟ್ಟಿದ್ದಿದ್ದರೆ ಅಸಲಿಗೆ ಕಾಶ್ಮೀರದ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಭಾರತದ ಪಾಲಿಗೆ ಕಾಶ್ಮೀರವೂ ಇರುತ್ತಿರಲಿಲ್ಲ. ಭಾರತೀಯ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಏನೇ ಮಾತಾಡಿರಲಿ, ಭಾರತೀಯ ಪ್ರಜೆ ಏನೇ ಭಾವಿಸಿ ಕೊಂಡಿರಲಿ: ಒಂದಂತೂ ಸತ್ಯ. ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ: ಕಾಶ್ಮೀರವೆಂಬುದು ಭಾರತ ದೇಶಕ್ಕೆ ಶ್ರೀ ಹರಿಸಿಂಗ್ ನೀಡಿದ ಕೊಡುಗೆ!

ಕಾಶ್ಮೀರ ಯುದ್ಧ ಲಾರ್ಡ್ ಮೌಂಟ್ ಬ್ಯಾಟನ್‌ನನ್ನು ಕ್ರುದ್ಧನನ್ನಾಗಿಸಿತ್ತು. ಎಷ್ಟಾದರೂ ಆತ ಹೊರಗಿ ನವನು. ಎರಡೂ ರಾಷ್ಟ್ರಗಳ ಮಧ್ಯೆ ಸಮನ್ವಯ ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕಾದವನು. ಭಾರತದ ಪರವಾಗಿ ನಿಂತು ಯುದ್ಧ ನಿರ್ದೇಶನ ಮಾಡುವಂತಿರಲಿಲ್ಲ. ಆತನಲ್ಲದೆ ಅವತ್ತಿನ ಸ್ಥಿತಿಯಲ್ಲಿ ಆ ಕೆಲಸವನ್ನು ಆತನಿಗಿಂತ ಚೆನ್ನಾಗಿ ಮಾಡಬಲ್ಲವರು ಯಾರೂ ಇರಲಿಲ್ಲ. ಆತ ನೀಡಿದ ಅತಿ ದೊಡ್ಡ ಕೊಡುಗೆಯೆಂದರೆ, ಅವತ್ತಿನ ಆ ಕಗ್ಗಂಟಿನಲ್ಲಿ, ಗೊಂದಲದಲ್ಲಿ ಭಾರತ ಮತ್ತು ಪಾಕಿಸ್ತಾನ್ ಪೂರ್ಣ ಪ್ರಮಾಣದ ಯುದ್ಧಕ್ಕೆ ತೊಡಗದಂತೆ ನೋಡಿಕೊಂಡದ್ದು. ಆ ಪರಿಯ ಜನಾಂಗೀಯ ದ್ವೇಷವಿದ್ದ ಕಾಲದಲ್ಲಿ ಅಷ್ಟರ ಮಟ್ಟಿಗೆ ಇಬ್ಬರನ್ನೂ ತಡೆದದ್ದೇ ದೊಡ್ಡ ಪವಾಡವೆನ್ನಿಸಿತ್ತು.

ಆದರೆ ಮೌಂಟ್ ಬ್ಯಾಟನ್ ಮತ್ತೊಂದು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದ. ಇದ್ದಕ್ಕಿದ್ದಂತೆ ಆರಂಭವಾದ ಯುದ್ಧದಿಂದಾಗಿ ಸೈನ್ಯದ ಬಹುಭಾಗ ಕಾಶ್ಮೀರದತ್ತ ಹೋಗಿ ಬಿಟ್ಟಿತ್ತು. ಇಲ್ಲಿ ಮತೀಯ ದಂಗೆಯನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ಸೈನ್ಯವಿರಲಿಲ್ಲ. ಸೇನೆಯ ಮಹಾ ದಂಡನಾಯಕನಾಗಿದ್ದ ಆತನಿಗೆ ಒಂದೇ ಒಂದು ಇಶಾರೆಯಲ್ಲಿ ಸೇನೆಯನ್ನು ಕರೆಯಿಸಿ ಎಲ್ಲವನ್ನೂ ಕ್ಷಣಾರ್ಧದಲ್ಲಿ ಸದ್ದಡಗಿಸಿ ಬಿಡುವುದು ಅಭ್ಯಾಸ. ಆದರೆ ಈಗ ದಿಲ್ಲಿಯ ಸರ್ಕಾರಿ ಬಂಗಲೆಯ ಮ್ಯಾಪ್ ರೂಂನಲ್ಲಿ ಆತ ನಿಸ್ಸಹಾಯಕ

ನಾಗಿ ಕೂಡಬೇಕಾಗಿತ್ತು. ನೆಲೆ ಕಳೆದುಕೊಂಡು ಗುಳೇ ಹೊರಟ ನಿರಾಶ್ರಿತರ ಚಲನವಲನವನ್ನು ವಿವರಿಸುವಂತಹ ಮ್ಯಾಪ್‌ಗಳು ಮತ್ತು ಛಾರ್ಟುಗಳು ಆತನೆದುರಿಗಿದ್ದವು. ದಿನದಿನಕ್ಕೂ ಪರಿಸ್ಥಿತಿ ಹದಗೆಡುತ್ತಿದೆಯೆಂಬ ವಾರ್ತೆಗಳು ಬಂದು ತಲುಪುತ್ತಿದ್ದವು.

ಅದನ್ನು ಅರ್ಥ ಮಾಡಿಕೊಳ್ಳಲು ಯಾವ ವರದಿಗಳ ಅವಶ್ಯಕತೆಯೂ ಇರಲಿಲ್ಲ. ದೇಶದ ವಿಭಜನೆಗೆ ಸಂಬಂಧಿಸಿದಂತೆ ‘ಮೌಂಟ್ ಬ್ಯಾಟನ್ ಪ್ಲಾನ್’ ಘೋಷಿತವಾದ ಆರು ತಿಂಗಳಲ್ಲಿ ಹತ್ತು ಲಕ್ಷದಷ್ಟಿದ್ದ ದಿಲ್ಲಿಯ ಜನಸಂಖ್ಯೆ ಅದರ ದುಪ್ಪಟ್ಟಾಗಿತ್ತು. ನಿರಾಶ್ರಿತರು ಬರುತ್ತಲೇ ಇದ್ದರು. ಬರುತ್ತಿದ್ದವರು ಸಾಮಾನ್ಯ ಜನರಾಗಿರಲಿಲ್ಲ. ಅವರು ವ್ಯಗ್ರರಾಗಿದ್ದರು, ಕ್ರುದ್ಧರಾಗಿದ್ದರು, ಏನು ಮಾಡಲಿಕ್ಕೂ ಹಿಂಜರಿಯದ ಮನೋಸ್ಥಿತಿಯಲ್ಲಿದ್ದರು. ಪ್ರವಾಹಕ್ಕೆ ಸಿಕ್ಕ ನಿಸ್ಸಹಾಯಕ ಹುಳುಗಳಂತಹ ಗಂಡಸರು-ಹೆಂಗಸರು. ಮನುಷ್ಯ- ಮನುಷ್ಯನ ಮೇಲೆ ಎಸಗಿದ ಭಯಾನಕ ಅತ್ಯಾಚಾರಗಳಿಗೆ ಸಾಕ್ಷಿಯಾದ ಜನ. ಎಲ್ಲವನ್ನೂ ಕಳೆದುಕೊಂಡು ಓಡಿ ಬಂದಿದ್ದ ಜನ. ಅಂಥ ಜನರ ಮಧ್ಯೆ ಇದ್ದ ಒಬ್ಬ ಯುವಕನ ಹೆಸರೇ ಮದನಲಾಲ್ ಪಹ್ವಾ: ಮಹಾತ್ಮಾ ಗಾಂಧಿಯ ಹತ್ಯೆಯಲ್ಲಿ ಪಾಲ್ಗೊಂಡು ಜೀವಾವಧಿ ಶಿಕ್ಷೆಗೆ ಗುರಿಯಾದವನು. “ನಾವು ಹಗಲಿರುಳೂ ನಡೆದೆವು. ಎಲ್ಲ ವಯಸ್ಸಿನ, ಎಲ್ಲ ಸ್ಥಿತಿಯಲ್ಲಿದ್ದ ಗಂಡಸರಿದ್ದರು, ಹೆಂಗಸರಿದ್ದರು. ಅನೇಕರಿಗೆ ನಡೆದು ಬರುವ ತಾಕತ್ತಿರಲಿಲ್ಲ. ಅವರಲ್ಲಿ ಹೆಚ್ಚಿನವರು ಹೆಂಗಸರು ಮತ್ತು ಮಕ್ಕಳು. ಅವರನ್ನು ಅಲ್ಲೇ ರಸ್ತೆಯಲ್ಲಿ ಬಿಟ್ಟು ಬಂದೆವು” ಅಂತ ಆತ ಮುಂದೊಮ್ಮೆ ಹೇಳಿಕೆ ನೀಡಿದ್ದ.

ವಿಪರೀತವಾದ ಕಷ್ಟ ಅನುಭವಿಸಿ ಪಾಕಿಸ್ತಾನದ ಗಡಿ ದಾಟಿದ ಮದನಲಾಲ್ ಪಹ್ವಾ ಭಾರತದೊಳಕ್ಕೆ ಕಾಲಿಟ್ಟವನು ಫಜಿಲ್ಕಾ ಎಂಬ ಊರು ತಲುಪಿಕೊಂಡಿದ್ದ. ಅವನ ತಂದೆ ಮತ್ತು ಇತರೆ ಬಂಧುಗಳು ಹೊರಟಿದ್ದ ಇನ್ನೊಂದು ನಿರಾಶ್ರಿತ ಸಮೂಹ ಅವನಿಗಿಂತ ಹೆಚ್ಚಿನ ಸಂಕಷ್ಟಗಳನ್ನು ಅನುಭವಿಸಿತ್ತು. ಅವರನ್ನು ಮುಸ್ಲಿಮರು ದಾರಿಯುದ್ದಕ್ಕೂ ಕಾಡಿದ್ದರು. “ಹೊರಟ ಸುಮಾರು ಐದುನೂರು ಹಿಂದೂ ನಿರಾಶ್ರಿತರ ಪೈಕಿ ಬದುಕುಳಿದು ಭಾರತಕ್ಕೆ ತಲುಪಿದ್ದು, ಕೇವಲ ನಲವತ್ತು-ಐವತ್ತು ಜನ. ಅವರಾದರೂ ಹೀನಾಯ ಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿದ್ದರು. ನನ್ನ ಚಿಕ್ಕಮ್ಮನ ಹತ್ಯೆಯಾಗಿತ್ತು. ನೂರಕ್ಕೂ ಹೆಚ್ಚು ಹುಡುಗಿಯರನ್ನು ಹೊತ್ತೊಯ್ದಿದ್ದರು. ಶವಗಳ ರಾಶಿಯಿಂದ ನನ್ನ ತಂದೆಯನ್ನು ಹೊರಗೆಳೆದು ಬದುಕಿಸಿದ್ದಾಗಿತ್ತು” ಅಂತ ಹೇಳಿದ್ದ ಪಹ್ವಾ.

ಫಜಿಲ್ಕಾಕ್ಕೆ ಬಂದು ತಲುಪಿಕೊಂಡ ಅವನು ಮತ್ತಷ್ಟು ನಿರಾಶ್ರಿತರ ಸಾಲುಗಳು ಬರುವುದನ್ನು ನೋಡಿದ್ದ. ಒಂದಂತೂ ನಲವತ್ತು ಮೈಲಿ ಉದ್ದವಿದ್ದ ನಿರಾಶ್ರಿತ ಸಮೂಹ. ಇನ್ನೊಂದು ಸಾಲಿನಲ್ಲಿ ಸುಮಾರು ಐದುನೂರು ಜನ ಹೆಂಗಸರನ್ನು ಬೆತ್ತಲೆ ಮಾಡಿ ಕಳಿಸಲಾಗಿತ್ತು. ಎದೆ ಬಿಟ್ಟುಕೊಂಡು ಬಂದ ಹೆಂಗಸರಿದ್ದರು. ಕೆಲವರ ಕೆನ್ನೆ ಕಚ್ಚಲಾಗಿತ್ತು. ಮೂಗು ಕಿವಿ ಕತ್ತರಿಸಲಾಗಿತ್ತು. ಒಂದು ಮಗುವನ್ನಂತೂ ಅದರ ತಾಯಿಯ ಎದುರಿನಲ್ಲೇ ಜೀವಂತ ಸುಟ್ಟು ಹಾಕಿದ್ದರು. ಮತ್ತೊಬ್ಬ ಹೆಂಗಸನ್ನು ದಾರುಣವಾಗಿ ಮಾನಭಂಗ ಮಾಡುವಾಗ ಅವಳ ಗಂಡನನ್ನು ಅಲ್ಲೇ ಮರವೊಂದಕ್ಕೆ ಕಟ್ಟಿಹಾಕಲಾಗಿತ್ತು.

ಇದೆಲ್ಲ ಒಬ್ಬ ಮನುಷ್ಯ ಹೇಳಿಕೊಂಡ ಅನುಭವದ ವಿವರ. ಇಂಥವರು ಸುಮಾರು ಎಪ್ಪತ್ತು ಲಕ್ಷ ನಿರಾಶ್ರಿತರು ಭಾರತದಲ್ಲಿದ್ದರು. ಅವರಲ್ಲಿ ಏನಿಲ್ಲವೆಂದರೂ ಹತ್ತು ಲಕ್ಷ ಜನ ದಿಲ್ಲಿಯಲ್ಲೇ ಇದ್ದರು. ದಿಲ್ಲಿಗೆ ಬಂದ ಮೇಲೆ ಅವರಿಗೆ ಅರ್ಥವಾದದ್ದೆಂದರೆ, ನಮ್ಮ ಕಷ್ಟಗಳಿನ್ನೂ ಮುಗಿದಿಲ್ಲ ! ಸುತ್ತೂ ತಂತಿ.

ಬೇಲಿ ಹಾಕಿ ಅವರನ್ನೊಂದು ಬಯಲಿನಲ್ಲಿ ಕೂಡಿ ಹಾಕಲಾಗಿತ್ತು. ಅಲ್ಲೂ ವಿಪರೀತ ಇಕ್ಕಟ್ಟು. ತಂತಿ ಬೇಲಿಯ ಆವರಣಗಳು ಕಿಕ್ಕಿರಿದು ತುಳುಕತೊಡಗಿದ ನಂತರ ಬಂದ ನಿರಾಶ್ರಿತರನ್ನು ಭಾರತದ ಬೇರೆ ಊರುಗಳಿಗೆ ಹೋಗಲು ಹೇಳಲಾಗುತ್ತಿತ್ತು. ಇದು ಸಾಲದೆಂಬಂತೆ, ನಮ್ಮನ್ನೆಲ್ಲ ಪಾಕಿಸ್ತಾನಕ್ಕೆ ವಾಪಸು ಕಳಿಸುತ್ತಾರಂತೆ ಎಂಬ ವದಂತಿ ಹುಟ್ಟಿಕೊಂಡಿತ್ತು. ಅಲ್ಲಿಗೆ ವಾಪಸು ಕಳಿಸುತ್ತಾರಂತೆ.ಮತ್ತೆ ನಮ್ಮ ನಮ್ಮ ಮನೆಗಳಿಗೆ ಹಿಂತಿರುಗಿ ಏನೂ ಆಗೇ ಇಲ್ಲವೆಂಬಂತೆ ಅಲ್ಲೇ ವಾಸಕ್ಕಿರಬೇಕಂತೆ: ಹಾಗೆ ಆದೇಶಿಸುತ್ತಾರಂತೆ ಎಂಬ ವದಂತಿಗಳು ಹುಟ್ಟಿಕೊಂಡಿದ್ದವು.

ಅದು ಸುಮ್ಮ ಸುಮ್ಮನೆ ಹುಟ್ಟಿಕೊಂಡ ವದಂತಿಯೇನಾಗಿರಲಿಲ್ಲ. ಅದರ ಹಿಂದೆ ಗಾಂಧಿ ಇದ್ದರು. ಭಾರತಕ್ಕೆ ಗುಳೇ ಬಂದ ಹಿಂದೂಗಳನ್ನು ವಾಪಸು ಪಾಕಿಸ್ತಾನಕ್ಕೆ ಕಳಿಸಿದರೆ, ಇಲ್ಲಿಂದ ಗುಳೇ ಹೋಗಿದ್ದ ಮುಸಲ್ಮಾನರು ವಾಪಸು ಬಂದು ನೆಮ್ಮದಿಯಾಗಿ ನೆಲೆಗೊಳ್ಳುತ್ತಾರೆ. ಹೀಗಾಗಿ, ಪಾಕಿಸ್ತಾನದಿಂದ ಬಂದ ನಿರಾಶ್ರಿತರನ್ನು ವಾಪಸು ಕಳಿಸಿ ಎಂದು ಅವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ನಿರಾಶ್ರಿತರಿಗೆ ಗೊತ್ತಾಗಿತ್ತು. ಗಾಂಧಿ ಒಬ್ಬ ಮಹಾತ್ಮ. ಆತ ರಕ್ಷಕ, ಸ್ವಾತಂತ್ರ್ಯ ಹೋರಾಟಗಾರ, ಸಂತ, ಯಾವತ್ತಿಗೂ ತಪ್ಪು ಮಾಡದ ಮನುಷ್ಯ. ಆದರೆ ಗುಳೇ ಎದ್ದು ಬಂದ ನಿರಾಶ್ರಿತರ ದೃಷ್ಟಿಯಲ್ಲಿ ಆತ ಹಿಂದೂ ವಿರೋಧಿ, ಮುಸಲ್ಮಾನರ ಹಿತೈಷಿ: ತಮ್ಮ ಪರಮ ಶತ್ರು!

ಆರಂಭದಲ್ಲಿ ಅವರು ಗಾಂಧಿಯನ್ನೂ, ಕುರಿಗಳಂತೆ ಗಾಂಧಿ ಹೇಳಿದುದಕ್ಕೆಲ್ಲ ತಲೆ ಹಾಕುತ್ತಿದ್ದ ಭಾರತೀಯ ನಾಯಕರನ್ನೂ ಕೇವಲ ಶಪಿಸಿದರು. ಆದರೆ ತಂತಿ ಬೇಲಿಯ ಆವರಣ ದಾಟಿ ಬಂದು ಅನ್ನಕ್ಕಾಗಿ, ನೀರಿಗಾಗಿ ಅವರು ದಿಲ್ಲಿಯ ಬೀದಿಗಳಲ್ಲಿ ಅಲೆಯತೊಡಗಿದಾಗ ಅವರಿಗೆ ಬೇರೆಯದೇ ಪ್ರಪಂಚದ ಅನಾವರಣವಾಗಿತ್ತು. ಈ ದಿಲ್ಲಿ, ನಮ್ಮ ದೇಶದ ಹೆಮ್ಮೆಯ ರಾಜಧಾನಿ. ಇಲ್ಲಿ ದೊಡ್ಡ ಸಂಖ್ಯೆಯ ಮುಸಲ್ಮಾನರಿದ್ದಾರೆ. ಹೆಮ್ಮೆಯ ಬದುಕು ಬದುಕುತ್ತಿದ್ದಾರೆ: ತಮ್ಮ ಹಕ್ಕೇನೋ ಎಂಬಂತೆ. ಸರ್ಕಾರದಲ್ಲಿ ಅವರ ಮಾತು ನಡೆಯುತ್ತಿದೆ. ನಾನಾ ವೃತ್ತಿಗಳಲ್ಲಿದ್ದಾರೆ. ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಮುಸ್ಲಿಮರು ವಾಸಿಸುವ ಪ್ರದೇಶಗಳೆಲ್ಲ ಮಟ್ಟಸವಾಗಿ ನಗರದ ಮಧ್ಯದಲ್ಲೇ ಇವೆ. ಇದಿಷ್ಟೂ ಸಾಲದೆಂಬಂತೆ, ಅವರ ಪರವಾಗಿ ಬಡಿದಾಡಲು ಖುದ್ದು ಗಾಂಧಿ ದಿಲ್ಲಿಗೆ ಬಂದು ಮೊಕ್ಕಾಂ ಹೂಡಿದ್ದಾರೆ. ನೀವು ಎಲ್ಲಿದ್ದೀರೋ ಅಲ್ಲೇ ಇರಿ ಅಂತ ಮುಸ್ಲಿಮರಿಗೆ ತಾಕೀತು ಮಾಡುತ್ತಿದ್ದಾರೆ. ಹಿಂದೂಗಳ ಮತ್ತು ಸಿಬ್ಬರ ಕೈಲಿರುವ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಿ: ಆಗಲೇ ಮುಸ್ಲಿಮರು ನೆಮ್ಮದಿಯಿಂದ, ನಿರ್ಭಯವಾಗಿ ಬದುಕಲು ಸಾಧ್ಯ ಅಂತ ನೆಹರೂ ಹಾಗೂ ಪಟೇಲರನ್ನು ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನದಿಂದ ದಿಲ್ಲಿಗೆ ಬಂದು ಬಿದ್ದಿದ್ದ ನಿರಾಶ್ರಿತರಿಗೆ ಇದೆಲ್ಲವೂ ಅರ್ಥಹೀನ ಮನೋವಿಕಾರ, ಹುಚ್ಚಾಟ, ಭಾರತೀಯ ನಾಯಕರ ಪುಕ್ಕಲುತನದ ಪರಮಾವಧಿ ಅನ್ನಿಸತೊಡಗಿತ್ತು. ಏಕೆಂದರೆ ಅವರನ್ನು ಪಾಕಿಸ್ತಾನ ಹೀಗೆ ನಡೆಸಿಕೊಂಡಿರಲಿಲ್ಲ!

ನುಗ್ಗಿ ಬಂದ ನಿರಾಶ್ರಿತರು ಇಲ್ಲಿನ ಮುಸಲ್ಮಾನರ ಮೇಲೆ ಯಾವ ಪರಿ ಮುರಕೊಂಡು ಬಿದ್ದರೆಂದರೆ, ಆ ರಭಸಕ್ಕೆ ತಡೆಯೇ ಇರಲಿಲ್ಲ. ಭಾರತದ ಮುಸಲ್ಮಾನರು ತಮಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂಬುದು ಅವರಿಗೆ ಮನಸ್ಸಿಗೇ ಬಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಅವರೆಲ್ಲ ಶತ್ರುಗಳೇ. ಅವರು ಮಾಡಿದ ಏಕೈಕ ತಪ್ಪೆಂದರೆ, ಅವರು ಮುಸಲ್ಮಾನರಾಗಿ ಹುಟ್ಟಿದ್ದು. ಯಾವಾಗ ನಿರಾಶ್ರಿತ ಹಿಂದೂಗಳು ಪಾಕಿಸ್ತಾನದಿಂದ ಬಂದು ಇಲ್ಲಿನ ಮುಸಲ್ಮಾನರ ಮೇಲೆ ಮುರಕೊಂಡು ಬೀಳತೊಡಗಿದರೋ, ದಿಲ್ಲಿಯಲ್ಲಿನ ಹಿಂದೂಗಳು ಮತ್ತು ಸಿಬ್ಬರು ಅವರೊಂದಿಗೆ ಸೇರಿಕೊಂಡು ಬಿಟ್ಟರು. ಅವರವರೇ ಒಂದಷ್ಟು ಗುಂಪುಗಳನ್ನು ಮಾಡಿಕೊಂಡು ಕೈಗೆ ಸಿಕ್ಕ ಆಯುಧಗಳನ್ನೆತ್ತಿಕೊಂಡು ಮುಸ್ಲಿಮರ ಮೇಲೆ ಹಲ್ಲೆ ಮಾಡತೊಡಗಿದರು. ” ಅವರನ್ನು ಮನೆಗಳಿಂದಾಚೆಗೆ ಓಡಿಸಿ, ಆ ಮನೆಗಳಲ್ಲಿ ತಾವು ಸೇರಿಕೊಂಡರು. ಆ ನಂತರ ದಿಲ್ಲಿಯ ಉದ್ದಗಲಕ್ಕೂ ಇದ್ದ ಮಸೀದಿಗಳನ್ನು, ಮದರಸಾಗಳನ್ನು ಆಕ್ರಮಿಸಿಕೊಂಡರು. ಬರಲಿದ್ದ ಭೀಕರ ಚಳಿಗಾಲವನ್ನು ಎದುರಿಸಲಿಕ್ಕೆ ಅವರಿಗೊಂದು ಸೂರು ಬೇಕಾಗಿತ್ತು.

ಅಲ್ಲಿಗೆ ದಿಲ್ಲಿಯೆಂಬುದು ಕೇವಲ ಮತೀಯ ಸಂಘರ್ಷದ ನಮೂನೆಯಾಗಿರದೆ, ಅದರ ತವರಿನಂತಾಗಿ ಹೋಯಿತು. ನಗರದಿಂದ ಕೇವಲ ಒಂದು ಮೈಲು ದೂರವಿದ್ದ ವಿಲ್ಲಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರ ನರಮೇಧ ನಡೆದು ಹೋಯಿತು. ಮೌಂಟ್ ಬ್ಯಾಟನ್‌ನ ಮನೆಯ ಹಿತ್ತಿಲಲ್ಲೇ, ಗವರ್ನಮೆಂಟ್ ಹೌಸ್‌ನ ಕಂಪೋಂಡಿನಲ್ಲೇ ಹಿಂದೂ ಮತ್ತು ಸಿಖ್ ವ್ಯಗ್ರರ ಗುಂಪೊಂದು ಸೇರಿಕೊಂಡು ಮುಸ್ಲಿಂ ನೌಕರರನ್ನು ಕೊಂದು ಹಾಕಿತು. “ದಿಲ್ಲಿಯ ಬೀದಿಗಳಿಗಿಳಿದರೆ ನಮ್ಮ ಕಥೆ ಮುಗಿದೇ ಹೋಗುತ್ತದೆ” ಅಂತ ಸ್ವತಃ ಮೌಂಟ್ ಬ್ಯಾಟನ್ ಉದ್ಧರಿಸಿದ್ದ. ಗಾಂಧಿ ಕೂಡ ಹೆಚ್ಚು ಕಡಿಮೆ ಇಂಥದ್ದೇ ಅರ್ಥ ಬರುವ ಮಾತನ್ನಾಡಿ ದ್ದರು: “ದಿಲ್ಲಿ ಕೈಬಿಟ್ಟು ಹೋದರೆ ಇಡೀ ಭಾರತವೇ ಕೈ ಬಿಟ್ಟು ಹೋದಂತೆ. ಅಲ್ಲಿಗೆ ಜಗತ್ತಿನ ಶಾಂತಿಯ ಕೊನೆಯ ಆಸೆಯೂ ನಶಿಸಿ ಹೋದಂತೆ!”

ಸೋಲೋ ಗೆಲುವೋ, ಅದು ದಿಲ್ಲಿಯಲ್ಲೇ ತೀರ್ಮಾನವಾಗಬೇಕು ಎಂಬುದು ಅವರಿಬ್ಬರಿಗೂ ಮನವರಿಕೆಯಾಗಿತ್ತು. ಭಾರತದ ಸೇನೆ ಮತ್ತು ವಾಯುದಳಗಳೆರಡೂ ಕಾಶ್ಮೀರದ ಯುದ್ಧದಲ್ಲಿ ನಿರತವಾಗಿದ್ದವು. ಇನ್ನು ಶಕ್ತಿ ಬಳಸಿ ಇಲ್ಲಿನ ಮತೀಯ ದಂಗೆಗಳನ್ನು ಹತ್ತಿಕ್ಕುವುದು ಸಾಧ್ಯವಿರಲಿಲ್ಲ. ಮೌಂಟ್ ಬ್ಯಾಟನ್‌ಗೆ ಅದು ಅರ್ಥವಾಗಿತ್ತು. ತನ್ನ ಆತಂಕಗಳನ್ನು ಆತ ನೆಹರೂ ಮುಂದೆ ಹೇಳಿಕೊಂಡಿದ್ದ. ಗಾಂಧೀಜಿಯ ಮುಂದೂ ತೋಡಿಕೊಂಡಿದ್ದ. ಅಷ್ಟೇ ಅಲ್ಲ, ಮತೀಯ ಗಲಭೆಗಳನ್ನು ನಿಯಂತ್ರಿಸಲು ಆತ ‘ನೀವೇ ಏನಾದರೂ ಕ್ರಮ ಕೈಗೊಳ್ಳಿ’ ಎಂದು ಗಾಂಧೀಜಿಯನ್ನು ವಿನಂತಿಸಿದ್ದನಾ?

“ಮುಸಲ್ಮಾನರು ಭಾರತ ಬಿಟ್ಟು ಹೋಗದಂತೆ, ಇಲ್ಲೇ ಉಳಿಯುವಂತೆ ವಿಶೇಷವಾದುದನ್ನೇನಾದರೂ ಮಾಡಬೇಕು. ಆಗ ಪಾಕಿಸ್ತಾನವೂ ಅಲ್ಲಿನ ಹಿಂದೂಗಳನ್ನು ರಕ್ಷಿಸಲು ಮುಂದಾಗುತ್ತದೆ. ಅಂಥದ್ದೇನನ್ನಾ ದರೂ ತಕ್ಷಣ ಮಾಡಿ” ಎಂಬುದಾಗಿ ಗಾಂಧಿ ಮತ್ತು ನೆಹರೂ, ಇಬ್ಬರ ಮೇಲೂ ಮೌಂಟ್ ಬ್ಯಾಟನ್ ಒತ್ತಡ ಹೇರುತ್ತಿದ್ದ ಎಂಬುದಾಗಿ ದಿಲ್ಲಿಯ ಪತ್ರಕರ್ತ ಜೆ.ಎನ್.ಸಾಹನಿ ಬರೆಯುತ್ತಾರೆ. ಆ ದಿನಗಳಲ್ಲಿ ಅವರು ನಡೆಯುತ್ತಿದ್ದ ಘಟನೆಗಳೆಲ್ಲವುಗಳ ಪ್ರತ್ಯಕ್ಷದರ್ಶಿಯಾಗಿದ್ದರು.

ಭಾರತದಲ್ಲಿ ಕಳೆದದ್ದು ಕೆಲವೇ ತಿಂಗಳುಗಳಾದರೂ ಲಾರ್ಡ್ ಮೌಂಟ್ ಬ್ಯಾಟನ್ ಉಳಿದ ಯಾವುದೇ ಬ್ರಿಟಿಷ್ ಅಧಿಕಾರಿಗಿಂತ ಹೆಚ್ಚು ಸ್ಪುಟವಾಗಿ ಭಾರತೀಯ ಮನಸ್ತತ್ವವನ್ನು ಅರ್ಥ ಮಾಡಿಕೊಂಡಿದ್ದ.

ಹೀಗಾಗಿಯೇ ಆತ ಗಾಂಧಿಯ ಮೇಲೆ ಆ ತೆರನಾದ ಒತ್ತಡ ಹೇರುತ್ತಿದ್ದ. ಜನಸಾಮಾನ್ಯರ ಮೇಲೆ ಗಾಂಧೀಜಿಗಿದ್ದ ಅಸಾಧಾರಣ ಹಿಡಿತವನ್ನು ಆತ ಅರ್ಥ ಮಾಡಿಕೊಂಡಿದ್ದ. ಗಾಂಧೀಜಿಯ ಕೈಯಿಂದ ಅಂಥದೊಂದು ‘ಪವಾಡ’ ಮಾಡಿಸಲು ಮೌಂಟ್ ಬ್ಯಾಟನ್ ಹೊರಟಿದ್ದ. ಹಾಗೆ ಹೊರಟಿದ್ದರಲ್ಲೂ ಒಂದು ಅರ್ಥವಿತ್ತು. ಕೆಲವೇ ದಿನಗಳ ಹಿಂದೆ ಕಲ್ಕತ್ತಾದಲ್ಲಿ, ಪೂರ್ವ ಬಂಗಾಲದಲ್ಲಿ ಗಾಂಧೀಜಿ ಅಂಥದೊಂದು ಪವಾಡ ಮಾಡಿದ್ದರು. ಇದೇ ತೆರನಾದ ಮತೀಯ ಆಕ್ರೋಶವೊಂದು ಅಲ್ಲೂ ಭುಗಿಲೆದ್ದಿತ್ತು. ಮನುಷ್ಯರ ಮನ ಪರಿವರ್ತನೆ ಮಾಡುವ ಮೂಲಕ, ಒಂದು ನೈತಿಕ ಹೋರಾಟವನ್ನು ಮಾಡಿ ಅಲ್ಲಿ ಗಲಭೆಗಳಾಗದಂತೆ ತಡೆದಿದ್ದರು ಗಾಂಧೀಜಿ. ದಿಲ್ಲಿಯಲ್ಲೂ ಅವರು ತಮ್ಮ ಅದೇ ತಂತ್ರವನ್ನು ಪ್ರಯೋಗಿಸಬಾರದೇಕೆ?

ಅದು ಮೌಂಟ್‌ ಬ್ಯಾಟನ್‌ನ ಒತ್ತಾಯವೋ ಅಥವಾ ತಾವಾಗಿಯೇ ಆ ನಿರ್ಧಾರಕ್ಕೆ ಬಂದಿದ್ದರೋ? ಜನವರಿಯ ಆ ಸಂಜೆ ಅವರು ಮೌಂಟ್ ಬ್ಯಾಟನ್‌ನನ್ನು ಭೇಟಿಯಾಗಲು ಹೋಗುವ ಹೊತ್ತಿಗೆ ಒಂದು ನಿರ್ಧಾರಕ್ಕೆ ಬಂದಿದ್ದರು. ಕೆಲವೇ ನಿಮಿಷಗಳಿಗೆ ಮುಂಚೆ ಮುಗಿಸಿ ಬಂದ ತಮ್ಮ ದಿನ ನಿತ್ಯದ ಪ್ರಾರ್ಥನಾ ಸಭೆಯಲ್ಲಿ ಅವರು ತಮ್ಮ ನಿರ್ಧಾರ ಘೋಷಿಸಿ ಬಂದಿದ್ದರು: ಅದು ಅನಿರ್ದಿಷ್ಟ ಅವಧಿಯ ಉಪವಾಸದ ನಿರ್ಧಾರ!

“ಅಹಿಂಸೆಯ ಆರಾಧಕನೊಬ್ಬ ಕೆಲವೊಮ್ಮೆ ಅನಿವಾರ್ಯವಾಗಿ ಇಂಥ ಅನಿರ್ದಿಷ್ಟ ಉಪವಾಸದ ವ್ರತ ಕೈಗೆತ್ತಿಕೊಳ್ಳುತ್ತಾನೆ: ಸಮಾಜವು ಮಾಡಿದ ತಪ್ಪುಗಳನ್ನು ಪ್ರತಿಭಟಿಸುವುದಕ್ಕಾಗಿ. ಬೇರೆ ಯಾವ ದಾರಿಯೂ ಇಲ್ಲದಾದಾಗ ಆತ ಇಂಥ ಕ್ರಮ ಕೈಗೊಳ್ಳುತ್ತಾನೆ. ಎಲ್ಲ ಜಾತಿಗಳ ಹೃದಯಗಳು ಮತ್ತೆ ಪ್ರೀತಿಯಿಂದ ಬೆಸಗೊಂಡಿವೆ ಎಂದು ನನಗೆ ಖಚಿತವಾದ ದಿನ ನನ್ನ ಉಪವಾಸ ಕೊನೆಗೊಳ್ಳುತ್ತದೆ” ಎಂದು ಅವರು ಘೋಷಿಸಿದ್ದರು.

ತಮ್ಮ ಬತ್ತಳಿಕೆಯಲ್ಲಿದ್ದ ಕೊನೆಯ ಅಸ್ತ್ರವೆಂದರೆ ಉಪವಾಸ. ಈ ಬಾರಿ ಅದು ಪರಿಣಾಮ ಬೀರಲಿದೆಯಾ? ನೋಡಬೇಕಿತ್ತು. ಆದರೆ ಒಂದು ಮಾತು ಖಚಿತವಿತ್ತು. ಗಾಂಧೀಜಿಯ ಉಪವಾಸ ಕೂಡ ಎಲ್ಲ ಜಾತಿಗಳ ಹೃದಯಗಳು ಪ್ರೀತಿಯಿಂದ ಬೆಸಗೊಳ್ಳುವಂತೆ ಮಾಡುವಲ್ಲಿ ವಿಫಲವಾದರೆ, ಮತ್ತಾವುದು ಕೂಡ ಅದನ್ನು ಸಾಧ್ಯವಾಗಿಸುವುದಾಗುತ್ತಿರಲಿಲ್ಲ.

ಜಾತಿಯಿಂದ ಗಾಂಧೀಜಿ ಒಬ್ಬ ಬನಿಯಾ. ಕೋಮಟಿಗ. ಅದು ವ್ಯಾಪಾರಸ್ಥರ ಜಾತಿ. ಅವರು ವ್ಯಾಪಾರದಲ್ಲಿ ಮಹಾ ನಿಪುಣರು. ಅವರು ಸಿದ್ದಪಡಿಸುವ ಶಸ್ತ್ರ, ಅದು ಕೊನೆಯದಾದರೂ ಸರಿಯೇ:ಎರಡು ಶಸ್ತ್ರಗಳ ಕೆಲಸ ಮಾಡಬಲ್ಲ ಸಾಮರ್ಥ್ಯ ಅದಕ್ಕಿರುವಂತೆ ನೋಡಿಕೊಳ್ಳುತ್ತಾರೆ.

ದೇಶವಿಭಜನೆಯ ಪರಿಣಾಮಗಳ ಪೈಕಿ ಮುಖ್ಯವಾದುದೆಂದರೆ, ಬ್ರಿಟಿಷರು ಬಿಟ್ಟು ಹೋಗಲಿದ್ದ ಆಸ್ತಿಯ ವಿಭಜನೆ: ಸ್ಥಿರಾಸ್ತಿಯ ಹಂಚಿಕೆ. ಹಡಗು, ವಿಮಾನ, ಬಂದೂಕು, ಮದ್ದು ಗುಂಡು, ರೇಲ್ವೆ ಇಂಜಿನ್ನು, ಬೋಗಿ, ಕಚೇರಿಯೊಳಗಿನ ಪೀಠೋಪಕರಣ, ಕಡೆಗೆ ಫೈಲುಗಳನ್ನೂ ಎರಡು ದೇಶಗಳು ಹಂಚಿಕೊಳ್ಳಬೇಕಾ ಗಿತ್ತು. ಜೊತೆಗಿಷ್ಟು ಹಣದ ಹಂಚಿಕೆಯೂ ಆಗಬೇಕಿತ್ತು. ದೇಶ ವಿಭಜನೆಯಾಗುವುದಕ್ಕೆ ಮುಂಚೆ ಅವಿಭಕ್ತ ಭಾರತದ ಬೊಕ್ಕಸವಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 220 ಕೋಟಿ ರುಪಾಯಿಗಳಿದ್ದು, ಅದರಲ್ಲಿ ಕಾಲುಭಾಗ, ಅಂದರೆ 55 ಕೋಟಿ ರುಪಾಯಿಗಳನ್ನು ಪಾಕಿಸ್ತಾನಕ್ಕೆ ಕೊಡಬೇಕಿತ್ತು. ಈ ಹಣದ ಹಂಚಿಕೆಯ ವಿಷಯವಾಗಿ ಸಾಕಷ್ಟು ಕಿತ್ತಾಟವಾಗಿ, 1947ರ ನವೆಂಬರ್ ಬಂದು, ಪಾಕಿಸ್ತಾನ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾದರೂ ಒಂದು ತೀರ್ಮಾನಕ್ಕೆ ಬರುವುದು ಸಾಧ್ಯವಾಗಿರಲಿಲ್ಲ. ಈ ಹೊತ್ತಿಗೆ ಕಾಶ್ಮೀರ್ ಯುದ್ಧ ಆರಂಭವಾಗಿ ಭರ್ತಿ ಒಂದು ತಿಂಗಳಾಗಿತ್ತು. ಅಲ್ಲಿ ಯುದ್ಧ ಮಾಡಲು ಬಂದಿದ್ದ ‘ಬುಡಕಟ್ಟು’ ಯೋಧರನ್ನು ಪಾಕಿಸ್ತಾನದ ಸೇನೆ, ಸೇನೆಯ ಮಹಾ ದಂಡನಾಯಕ ನಿರ್ದೇಶಿಸುತ್ತಿದ್ದ ಮತ್ತು ಎಲ್ಲ ಸೈನಿಕ ಸಹಾಯವನ್ನು ಕೊಡಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿತ್ತು. ದಾಳಿಯಿಡುತ್ತಿದ್ದ ‘ಬುಡಕಟ್ಟಿ’ನ ಆಕ್ರಮಣಕಾರರು ಕಾಶ್ಮೀರದಲ್ಲಿ ಏನೇ ಮಾಡಿದರೂ, ಅದಕ್ಕೆ ತಾವು ಜವಾಬ್ದಾರರಲ್ಲ ಅಂತ ಬಹಿರಂಗವಾಗಿ ಹೇಳಿಕೊಂಡಿದ್ದರೂ, ಈ ಆಕ್ರಮಣಕಾರರನ್ನು ಸೃಷ್ಟಿಸಿದ್ದು ತಾನೇ ಎಂಬ ಸಂಗತಿಯನ್ನು ಮಹಮ್ಮದ್ ಅಲಿ ಜಿನ್ನಾ, ಮೌಂಟ್ ಬ್ಯಾಟನ್‌ನ ಎದುರು ಒಪ್ಪಿಕೊಂಡಿದ್ದ. ಒಂದು ಹಂತದಲ್ಲಿ ಭಾರತೀಯ ಸೇನೆ ಎಷ್ಟು ಬಿರುಸಾಗಿ, ಖಡದ್ದಾಗಿ ಕಾಶ್ಮೀರದಲ್ಲಿ ಕಾಲೂರಿಕೊಂಡು ನಿಂತಿದೆಯೆಂದರೆ, ಆಕ್ರಮಣಕಾರರು.

ಕಾಶ್ಮೀರವನ್ನು ಗೆಲ್ಲುವ ಸಾಧ್ಯತೆಯೇ ಇಲ್ಲ ಎಂಬುದನ್ನು ಮೌಂಟ್ ಬ್ಯಾಟನ್ ಜಿನ್ನಾಗೆ ಔಪಚಾರಿಕವಾಗಿ ಮಾತಾಡುತ್ತಿದ್ದಾಗ ತಿಳಿಸಿದ್ದರು. ಹಾಗಾದರೆ ಎರಡೂ ಕಡೆಯ ಪಡೆಗಳು ಏಕ ಕಾಲದಲ್ಲಿ ಶ್ರೀನಗರ್ ಕಣಿವೆಯಿಂದ ಹಿಂತಿರುಗಿ ಬಿಡುವುದು ಒಳಿತು ಅಂದಿದ್ದ ಜಿನ್ನಾ. ಭಾರತೀಯ ಸೇನೆಯನ್ನೇನೋ ಹಿಂದಕ್ಕೆ ಕರೆಸಬಹುದು, ಆದರೆ ಯಾರ ಮಾತೂ ಕೇಳದ ‘ಬುಡಕಟ್ಟಿ’ನ ಆಕ್ರಮಣಕಾರರನ್ನು ನೀವು ಹೇಗೆ ಹಿಂದಕ್ಕೆ ಕರೆಸಿಕೊಳ್ಳುತ್ತೀರಿ ಎಂದು ಕೇಳಿದುದಕ್ಕೆ, “ಆ ಕೆಲಸ ನನಗೆ ಬಿಡಿ. ನೀವು ಭಾರತದ ಸೇನೆಯನ್ನು ಹಿಂದಕ್ಕೆ ಪಡೆದರೆ, ನಾನು ಎಲ್ಲವೂ ಮುಗಿಯುವಂತೆ ನೋಡಿಕೊಳ್ಳುತ್ತೇನೆ” ಅಂದಿದ್ದ ಜಿನ್ನಾ.

ಇದೆಲ್ಲ ಗೊತ್ತಿದ್ದು ಕೊಂಡೂ ಈಗ ಪಾಕಿಸ್ತಾನಕ್ಕೆ 55 ಕೋಟಿ ರುಪಾಯಿ ಕೊಡುವುದೆಂದರೆ, ಅವರಿಗೆ ಯುದ್ಧ ಮಾಡಲು ಹೊಸ ತಾಕತ್ತು ಕೊಟ್ಟಂತೆಯೇ ಎಂದು ನೆಹರೂ ಭಾವಿಸಿದ್ದರು. ಅದಕ್ಕೆ ಸರ್ದಾ‌ರ್ ಪಟೇಲರ ಸಂಪೂರ್ಣ ಸಮರ್ಥನೆಯಿತ್ತು. ‘ಕಾಶ್ಮೀರದ ಸಮಸ್ಯೆ ಇತ್ಯರ್ಥವಾಗುವ ತನಕ ಭಾರತವು ಪಾಕಿಸ್ತಾನಕ್ಕೆ ಹಣ ಕೊಡುವ ಮಾತೇ ಇಲ್ಲ’ ಎಂದು ನವೆಂಬರ್ 28ರಂದು ಪಾಕಿಸ್ತಾನದ ಪ್ರತಿನಿಧಿಗೆ ಸರ್ದಾರ್ ಪಟೇಲರು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ಈ ಬಗ್ಗೆ ಯಾವ ಭಾರತೀಯನೂ ತಕರಾರು ತೆಗೆಯುವಂತಿರಲಿಲ್ಲ. ಯುದ್ಧಕ್ಕೆ ಬಿದ್ದ ಶತ್ರು ದೇಶಕ್ಕೆ ಯಾವನೂ ದೊಡ್ಡ ಮೊತ್ತದ ಹಣ ಒಯ್ದು ಕೊಡಲಾರ. ಆದರೆ ಮೌಂಟ್ ಬ್ಯಾಟನ್ ಅದನ್ನು ಹಾಗೆ ನೋಡಲಿಲ್ಲ. ‘ಇದು ಮುತ್ಸದ್ದಿ ತನದ ಲಕ್ಷಣವಲ್ಲ. ಬುದ್ಧಿವಂತಿಕೆಯ ನಿಲುವೂ ಅಲ್ಲ’ ಎಂದು ಕ್ಯಾಂಪ್‌ಬೆಲ್ ಜಾನ್ಸನ್‌ಗೆ ಆತ ಹೇಳಿದ್ದ. ಈ ಬಗ್ಗೆ ಮೌಂಟ್ ಬ್ಯಾಟನ್ ಗಾಂಧೀಜಿಯೊಂದಿಗೆ ಮಾತನಾಡಿರಬೇಕು. ಗಾಂಧೀಜಿ ಅದನ್ನು ಒಪ್ಪಿಕೊಂಡಿದುದಷ್ಟೇ ಅಲ್ಲ, ನೆಹರೂ ಮತ್ತು ಪಟೇಲರು ತಳೆದ ನಿಲುವು ನೈತಿಕವಾಗಿ ತಪ್ಪಾದುದು ಅಂದುಬಿಟ್ಟರು. ‘ತಂದೆಯ ಆಸ್ತಿಯಲ್ಲಿ ತಮ್ಮನಿಗೆ ಪಾಲು ಕೊಡದ ಅಣ್ಣನ ನಿಲುವಿದ್ದ ಹಾಗಿದೆ’ ಅಂದರು. ಅನೇಕ ಸಂಘಟಿತ, ಸಾತ್ವಿಕ ಹೋರಾಟಗಳ ಮಧ್ಯೆ ಅಸ್ತಿತ್ವಕ್ಕೆ ಬಂದ ಭಾರತ ಸರ್ಕಾರ ಈ ತೆರನಾದ ಕ್ಷುದ್ರತನಕ್ಕೆ ಇಳಿಯಲು ಹೇಗೆ ಸಾಧ್ಯ ಅಂದರು.

ಅಲ್ಲಿಗೆ ಗಾಂಧೀಜಿಯ ಕಿವಿಗೆ ಮಾತು ಬಿದ್ದಿತ್ತು. ‘ನೆಹರೂ ಮತ್ತು ಪಟೇಲರೊಂದಿಗೆ ನಾನು ಮಾತಾಡುತ್ತೇನೆ’ ಎಂದು ಮೌಂಟ್ ಬ್ಯಾಟನ್‌ಗೆ ಭರವಸೆ ಕೊಟ್ಟರು. ಅಷ್ಟೇ ಅಲ್ಲ, ಈ ವಿಷಯದಲ್ಲಿ ಮೌಂಟ್‌ ಬ್ಯಾಟನ್‌ನ ಅಭಿಪ್ರಾಯ ಕೇಳಿದ್ದು ತಾವೇ ಎಂದು ಹೇಳುವುದಾಗಿಯೂ ಮಾತು ಕೊಟ್ಟರು. ಮಾತು ಮುಗಿಸಿ ಹೊರಡಲೆಂದು ಗಾಂಧೀಜಿ ಮೇಲೆದ್ದಾಗ, ನಿಮ್ಮ ಉಪವಾಸ ಸತ್ಯಾಗ್ರಹ ಅತ್ಯಂತ ಧೈರ್ಯಶಾಲಿ ನಿಲುವಿನದಾಗಿದ್ದು, ಇವತ್ತಿನ ಪರಿಸ್ಥಿತಿಯಲ್ಲಿ ಇದರ ಅವಶ್ಯಕತೆ ತುಂಬ ಇತ್ತು ಎಂದು ಹೇಳಿದ್ದರು ಲಾರ್ಡ್ ಮೌಂಟ್ ಬ್ಯಾಟನ್. ಅಲ್ಲಿಗೆ ತಮ್ಮ ಮಹಾನ್ ನಿರ್ಧಾರಕ್ಕೆ ಚಾಲನೆ ಕೊಡಲು ಹೊರಟು ನಿಂತರು ಮಹಾತ್ಮಗಾಂಧಿ. ಈ ಮುಂಚೆ ಉಪವಾಸ ಸತ್ಯಾಗ್ರಹದ ಉಪಾಯ ಕೆಲಸ ಮಾಡಿತ್ತು. ಈ ಬಾರಿಯೂ ಅದು ಫಲಕಾರಿಯಾಗುವ ಅವಕಾಶಗಳಿದ್ದವು.

ಹಿಂದೆ 1921ರಲ್ಲಿ ಪ್ರಿನ್ಸ್ ಆಫ್ ವೇಲ್ಸ್‌ನ ದೊರೆ ಅಧಿಕೃತವಾಗಿ ಭಾರತದ ಪ್ರವಾಸಕ್ಕೆ ಬಂದಾಗ, ಆತ ಹೋದಲ್ಲೆಲ್ಲಾ ‘ಹರತಾಳ’ವನ್ನು ಆಚರಿಸುವಂತೆ ಗಾಂಧೀಜಿ ಕರೆ ನೀಡಿದ್ದರು. ಹರತಾಳವೆಂಬುದು ಶಾಂತಿಯುತ ಪ್ರತಿಭಟನೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಬೀದಿ ಭಣಗುಟ್ಟುವಂತೆ ಮಾಡಿ, ಇಡೀ ಜನಸ್ತೋಮ ತಂತಮ್ಮ ಮನೆಯಲ್ಲೇ ಉಳಿದು-ಅವತ್ತೇನು ರಜೆಯೇನೋ ಎಂಬಂತಹ ಧಿಕ್ಕಾರದ ವಾತಾವರಣವನ್ನು ಉಂಟು ಮಾಡುವುದು ಅದರ

ಉದ್ದೇಶ. ಆದರೆ ಆರಂಭದಲ್ಲೇ ದೊರೆ ಬಾಂಬೆಗೆ ಬರುತ್ತಿದ್ದಂತೆಯೇ ಹರತಾಳ ಅಂಕೆ ತಪ್ಪಿ ಹೋಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿ ಕಪ್ಪು ಬಾವುಟ ಜಾರಿಗೆ ಬಂದದ್ದೇ ಆದರೆ ಮೊದಲೇ ತುಳಿತಕ್ಕೆ ಒಳಪಟ್ಟ ಅಸ್ಪೃಶ್ಯರು ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿ ಹೋಗುತ್ತಾರೆ. ಆ ತನಕ ತಾವು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿ ಹೋಗುತ್ತವೆ ಎಂದು ಅರಿತು ಕೊಂಡ ಗಾಂಧಿ ಆ ಕೂಡಲೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಘೋಷಿಸಿದರು. ಅಸ್ಪೃಶ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ವಿಚಾರವನ್ನು ಕೈ ಬಿಡುವ ತನಕ ಉಪವಾಸ ನಿಲ್ಲಿಸುವುದಿಲ್ಲವೆಂದು ಘೋಷಿಸಿದರು. ಐದೇ ದಿನಗಳಲ್ಲಿ ಪವಾಡ ಸಂಭವಿಸಿತ್ತು. ಹಿಂದುಳಿದ ವರ್ಗಗಳ ನಾಯಕ ಡಾ.ಭೀಮರಾವ್ ಅಂಬೇಡ್ಕರ್ ಅವರು ಗಾಂಧೀಜಿಗೂ ಒಪ್ಪಿಗೆಯಾಗುವಂತಹ ಸಂಧಾನ ಸೂತ್ರಕ್ಕೆ ರಾಜಿಯಾದರು. ಮುಂದೆ 1943 ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ಪೊಲೀಸ್ ಹಾಗೂ ಮಿಲಿಟರಿಯನ್ನು ಬಳಸಿ ಬ್ರಿಟಿಷ್ ಸರ್ಕಾರ ನಿರ್ದಯ ರೀತಿಯಲ್ಲಿ ದಮನಕ್ಕೆ ಒಳಪಡಿಸಿದಾಗ ಎಪ್ಪತ್ತೈದು ವರ್ಷ ವಯಸ್ಸಿನ ಗಾಂಧೀಜಿ ‘ಆತ್ಮ ಪರಿಶುದ್ಧಿ’ಯ ಹೆಸರಿನಲ್ಲಿ ಇಪ್ಪತ್ತೊಂದು ದಿನಗಳ ಉಪವಾಸ ಮಾಡಿದ್ದರು. ಮತ್ತೂ ಒಮ್ಮೆ ಗಾಂಧೀಜಿ ಯವರು ಉಪವಾಸ ಮಾಡಬೇಕಾಗಿ ಬಂದದ್ದು ಸೆಪ್ಟಂಬರ್ 1ರಂದು. ಕಲ್ಕತ್ತಾದ ಹಿಂದೂಗಳು ಮುಸಲ್ಮಾನರ ಮೇಲೆ ದಾಳಿಯಿಟ್ಟಿದ್ದರೆಂದು ಕೇಳಿದ ಗಾಂಧೀಜಿ ತಕ್ಷಣವೇ ಕಲ್ಕತ್ತಾಕ್ಕೆ ಹೋಗಿದ್ದರು. ಅಲ್ಲಿ ಬಂಗಾಳದ ಗವರ್ನರ್ ಆಗಿದ್ದ ಸಿ.ರಾಜಗೋಪಾಲಾಚಾರಿಯವರಿಗೆ ಗಾಂಧೀಜಿ ತಮ್ಮ ದೇಹ ದಂಡನೆ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಗಾಂಧಿ ಹಟಕ್ಕೆ ಬಿದ್ದಿದ್ದರು. ಮಾತಿನ ಮಧ್ಯೆ,

“ಆಮರಣಾಂತ ಉಪವಾಸವನ್ನೇ ಮಾಡುವುದಾದರೆ ನೀರಿನೊಂದಿಗೆ ಲಿಂಬೆರಸವನ್ನಾದರೂ ಏಕೆ ಬೆರೆಸುತ್ತೀರಿ?” ಅಂದು ಬಿಟ್ಟಿದ್ದರು.

“ನೀವಂದದ್ದು ನಿಜ. ಅದೂ ಒಂದು ಬಲಹೀನತೆಯೇ! ಇನ್ನು ನಾನು ಲಿಂಬೆರಸವನ್ನೂ ತೆಗೆದುಕೊಳ್ಳುವುದಿಲ್ಲ” ಅಂದಿದ್ದರು.

ಈ ಬಾರಿ ಕೇವಲ ಎಪ್ಪತ್ತೂರು ಗಂಟೆಗಳ ಅವಧಿಯಲ್ಲಿ ಮತೀಯ ಗಲಭೆಗಳು ನಿಯಂತ್ರಣಕ್ಕೆ ಬಂದಿದ್ದವು.

ಒಟ್ಟಿನಲ್ಲಿ ಅವರ ಶಸ್ತ್ರಾಗಾರದಲ್ಲಿದ್ದ ಈ ಉಪವಾಸ ಸತ್ಯಾಗ್ರಹವೆಂಬ ಕೊನೆಯ ಅಸ್ತ್ರ ಪ್ರತೀ ಸಲ ಗಾಂಧಿಯವರಿಗೆ ಸಹಾಯ ಮಾಡಿತ್ತು. ಆದರೆ ಈ ಸಲ ಅದು ಪರಿಣಾಮಕಾರಿಯಾದೀತಾ? ದಿಲ್ಲಿಯ ಬೀದಿಗಳಲ್ಲಿ, ಎಲ್ಲವನ್ನೂ ಕಳೆದುಕೊಂಡು ಪಾಕಿಸ್ತಾನದಿಂದ ಬಂದಿದ್ದ ನಿರಾಶ್ರಿತರಿದ್ದರು. ಸಾವಿರಾರು ಜನರ ಸಾವು, ಅತ್ಯಾಚಾರಗಳನ್ನು ಅವರು ಕಣ್ಣಾರೆ ಕಂಡಿದ್ದರು. ಅವರಿಗೆ ಒಬ್ಬ ಗಾಂಧೀಜಿಯ ಪ್ರಾಣ ಕಟ್ಟಿಕೊಂಡು ಏನಾಗಬೇಕಿತ್ತು. ಅವರಿಗೆ ಸೇಡು ತೀರಿಸಿಕೊಳ್ಳುವುದು ಮುಖ್ಯವಾಗಿತ್ತು. ‘ನೆತ್ತರು ಒರೆಸಲು ನೆತ್ತರೇ ಬೇಕು’ ಎಂಬ ಕೂಗು ದಿಲ್ಲಿಯ ಬೀದಿಗಳಲ್ಲಿ ಮಾರ್ದನಿಸುತ್ತಿತ್ತು. ಅವರಿಗೆ ಯಾವ ಕಾರಣಕ್ಕೂ ಶಾಂತಿ ಬೇಕಾಗಿರಲಿಲ್ಲ. ಈ ವಿಷಯ ಉಳಿದೆಲ್ಲರಿಗಿಂತ ಹೆಚ್ಚಾಗಿ ಗಾಂಧಿಯವರಿಗೇ ಗೊತ್ತಿತ್ತು. “ಅಹಿಂಸಾ ತತ್ವಕ್ಕೆ ತಿಲಾಂಜಲಿ ಅರ್ಪಿಸುವ ಕಾಲ ಸನ್ನಿಹಿತವಾದಂತಿದೆ” ಎಂದು ಅವರೇ ತಮ್ಮ ಕಾರ್ಯದರ್ಶಿ ಪ್ಯಾರೇಲಾಲ್‌ಗೆ ಹೇಳಿದ್ದರು.

ನಿಜ ಹೇಳಬೇಕೆಂದರೆ ಹಿಂಸೆಯ ಸಮ್ಮುಖದಲ್ಲಿ ಅವರ ಅಹಿಂಸಾ ತತ್ವ ಯಾವಾಗಲೋ ಸೋತು ಹೋಗಿತ್ತು. ಕಾಂಗ್ರೆಸ್‌ನ ಒಳಗಾಗಲೀ ಹೊರಗಾಗಲೀ ಯಾರಿಗೂ ಅಹಿಂಸಾ ತತ್ವದ ಮೇಲೆ ನಂಬಿಕೆ ಉಳಿದಿರಲಿಲ್ಲ. ಮಾಮೂಲಿ ಸಂದರ್ಭಗಳಲ್ಲಾದರೆ ಅದು ಕೆಲಸ ಮಾಡುತ್ತಿತ್ತೇನೋ? ಆದರೆ ಸಂದರ್ಭ ಮಾಮೂಲಿಯಾಗಿರಲಿಲ್ಲ. ಅಲ್ಲಿಂದ ಉಧ್ವಸ್ಥರಾಗಿ ಭಾರತಕ್ಕೆ ಗುಳೇ ಬಂದಿದ್ದ ನಿರಾಶ್ರಿತರನ್ನು ಗದರಿಸಿ, ಅವರನ್ನು ವಾಪಸು ಹೋಗುವಂತೆ ಒತ್ತಾಯಿಸುವ ಗಾಂಧೀಜಿಯವರ ನಿಲುವು ಪ್ರತಿಯೊಬ್ಬರಿಗೂ ಅವಿವೇಕದಂತೆ, ಮನೋವಿಕಾರದಂತೆ ಕಾಣುತ್ತಿತ್ತೇ ಹೊರತು, ಅದನ್ನು ಅನುಮೋದಿಸುವವರು ಯಾರೂ ಇರಲಿಲ್ಲ. ಅತಿರೇಕದ ಆದರ್ಶಕ್ಕೆ ಬಿದ್ದ ಸಂತನೊಬ್ಬ ತನ್ನ ಜನಾಂಗವನ್ನೇ ಆ ಆದರ್ಶಕ್ಕಾಗಿ ಬಲಿಕೊಡಲು ಹೊರಟವನಂತೆ ಕಾಣುತ್ತಿದ್ದ.

“ಒಂದು ಕಾಲವಿತ್ತು: ಭಾರತ ನನ್ನ ಮಾತು ಕೇಳುತ್ತಿತ್ತು. ಇವತ್ತು ಆ ಸ್ಥಿತಿಯಿಲ್ಲ” ಎಂದು ಅವರೇ ಕೆಲವು ವಾರಗಳ ಹಿಂದೆ ಹೇಳಿಕೊಂಡಿದ್ದರು. ಈಗ ಉಪವಾಸವನ್ನು ಘೋಷಿಸುವ ಮೂಲಕ ಅವರು ತಮ್ಮ ತಾಕತ್ತನ್ನು ಪರೀಕ್ಷೆಗೆ ಒಡ್ಡಿಕೊಂಡಿದ್ದರು. ಉಪವಾಸವೆಂಬುದು ಅವರ ಅಹಿಂಸಾ ತತ್ವದ ಅಂತಿಮ ಅಸ್ತ್ರ.

ಎಪ್ಪತ್ತೊಂಬತ್ತರ ವಯಸ್ಸಿನಲ್ಲಿದ್ದ ಗಾಂಧೀಜಿ ಉಪವಾಸ ಘೋಷಿಸುವುದೆಂದರೆ, ನಿಜಕ್ಕೂ ಅದೊಂದು ಸಾಹಸವೇ. ಅವರು ಬದುಕುಳಿಯುವ ಭರವಸೆಯಾದರೂ ಎಲ್ಲಿತ್ತು? ಅಕಸ್ಮಾತ್ ಅವರು ತೀರಿಕೊಂಡರೆ ಈಗಾಗಲೇ ಕೈತಪ್ಪಿ ಹೋಗಿದ್ದ ಪರಿಸ್ಥಿತಿಗೆ, ಈ ಉರಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುವುದಿಲ್ಲವೆ?

ದಿಲ್ಲಿಯಲ್ಲಿಯೇ ಉಳಿದು ಅಲ್ಲಿನ ಸಂಕಷ್ಟವನ್ನೆಲ್ಲ ಕಣ್ಣಾರೆ ನೋಡಲು ಬೇರೆ ಯಾರಾದರೂ ಒಪ್ಪುತ್ತಿದ್ದ ರೇನೋ? ಆದರೆ ಅದಕ್ಕೆ ಲಾರ್ಡ್ ಮೌಂಟ್ ಬ್ಯಾಟನ್ ಸಿದ್ದನಿರಲಿಲ್ಲ. ಎಂಥ ದುಗುಡದ ಪರಿಸ್ಥಿತಿಯಲ್ಲೂ ಮನಸ್ಸಿನ ನೆಮ್ಮದಿ, ಸ್ಥಿರತೆಗಳನ್ನು ಕಳೆದುಕೊಳ್ಳದ ಸ್ವಭಾವ ಆತನದು. ಹೀಗಾಗಿ, ಹಲವಾರು ವಾರಗಳಿಗೆ ಮುಂಚೆಯೇ ನಿಗದಿಯಾಗಿದ್ದ ತನ್ನ ಬಿಕಾನೇರ್ ಭೇಟಿಯನ್ನು ಆತ ರದ್ದು ಮಾಡಲಿಲ್ಲ. ಬಿಕಾನೇರದ ಮಹಾರಾಜನೊಂದಿಗೆ ಬೇಟೆಯಾಡಲಿಕ್ಕೆ, ಆತನ ಸಂಸ್ಥಾನದ ಭವಿತವ್ಯದ ಕುರಿತು ಚರ್ಚಿಸಲಿಕ್ಕೆ ಮೌಂಟ್ ಬ್ಯಾಟನ್ ಹೊರಟು ಬಿಟ್ಟ. ದಿಲ್ಲಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಇಲ್ಲಿ ಗಾಂಧೀಜಿ ಉಪವಾಸ ಘೋಷಿಸಿದುದರ ಪ್ರಯುಕ್ತ ಬಿಕಾನೇರದ ಮಹಾರಾಜ, ಗೌರರ್ ಜನರಲ್ಲನಿಗೆ ಕೊಡಮಾಡಬೇಕಾದ ಅಧಿಕೃತ ಔತಣವೊಂದನ್ನು ಮಾತ್ರ ರದ್ದು ಮಾಡಲಾಗಿತ್ತು.

 

Leave a Reply

Your email address will not be published. Required fields are marked *

Back to top button