
ಆತ್ಮೀಯ ಓದುಗರಿಗೆಲ್ಲಾ ವಂದಿಸುತ್ತಾ🙏
ಮಠ ಮಠ ಮದ್ಯಾಹ್ನ ಮೂರು ಗಂಟೆ ಸಮಯ, ನಗರಕ್ಕೆ ಬಂದಿದ್ದ ಸುಮಾರು ಎಂಬತ್ತು ವರ್ಷದ ಹಿರಿಯ ನಾಗರೀಕರಾದ ಪರ್ವತಯ್ಯನವರು ತಮ್ಮ ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದು ಸುತ್ತಲೂ ಕಣ್ಣಾಡಿಸಿ, ತನ್ನೂರಿಗೆ ಹೋಗುವ ಬಸ್ ಬಿಟ್ಟು ಉಳಿದ ಊರಿಗೆ ಹೋಗುವ ಬಸ್ ಗಳು ಇರುವುದನ್ನು ನೋಡಿ,
ಅಲ್ಲೇ ಇದ್ದ ಕಛೇರಿಯ ಬಳಿ ಹೋಗಿ ಯಾವಾಗ ನಮ್ಮ ಊರಿನ ಬಸ್ ಬರುತ್ತದೆಂದು ಪ್ರಶ್ನಿಸಲು, ಮೂರು ಗಂಟೆಗೆ ಬರಬೇಕಿದ್ದ ಬಸ್ ಬಂದಿಲ್ಲ, ನಾಲ್ಕು ಗಂಟೆಗೆ ಬರಬಹುದೆಂದು ಹೇಳಲು, ಎಂದಿಗೆ ತಮ್ಮ ಊರಿನ ಬರುತ್ತದೋ ಎಂದು ಅಲ್ಲೇ ಇದ್ದ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡಿರುವಾಗ, ತಮ್ಮ ಮೊಬೈಲ್ ರಿಂಗ್ ಆಗಿದ್ದನ್ನು ನೋಡಿ, ಜೇಬಿನಿಂದ ತೆಗೆದು ಹಲೋ ಎನ್ನಲು, ಅಪ್ಪಾ ನಾನಪ್ಪಾ ನಿಮ್ಮ ಮಗ ಮಾತನಾಡುತ್ತಿರುವುದು, ನೀವು ಬೆಳಿಗ್ಗೆ ತಿಂಡಿ ತಿಂದು ಮಾತ್ರೆ ತೆಗೆದುಕೊಂಡೇ ಹೋಗಿಲ್ಲಾ, ನಾನು ಕೊಟ್ಟ ಮಾತ್ರೆ ಟೇಬಲ್ ಮೇಲಿದೆ ಎಂದಾಗ, ಓ ಅಷ್ಟೇ ತಾನೇ ಹೋಗಲೀ ಬಿಡಪ್ಪಾ ಮನೆಗೆ ಬಂದು ತೆಗೆದುಕೊಂಡರಾಯಿತು ಎಂದು ಹೇಳಲು, ಹಾಗಲ್ಲಪ್ಪಾ ನೀನು ನಿನ್ನೆ ರಾತ್ರಿಯೂ ಮಾತ್ರೆ ತೆಗೆದುಕೊಂಡಂತಿಲ್ಲ, ದಿನಕ್ಕೆ ಮೂರು ಹೊತ್ತು ತಪ್ಪದೆ ಮಾತ್ರೆ ತೆಗೆದುಕೊಳ್ಳಬೇಕು, ಒಂದು ಹೊತ್ತು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ತಲೆ ತಿರುಗುತ್ತದೆಂದು ಡಾಕ್ಟರ್ ಹೇಳಿಲ್ವಾ? ಎಂದಾಗ ಪರ್ವತಯ್ಯನವರು ಒಂದು ಕ್ಷಣ ಯೋಚಿಸಿ, ಹೌದು ಕಣಪ್ಪಾ ಗಡಿಬಿಡಿಯಲ್ಲಿ ಬಂದು ಬಿಟ್ಟೆ ಈಗಲೇ ತೆಗೆದುಕೊಳ್ಳುತ್ತೇನೆಂದು ಹೇಳಿ ಫೋನ್ ಆಫ್ ಮಾಡಿ ಅಲ್ಲೇ ಇದ್ದ ಮೆಡಿಕಲ್ ಸ್ಟೋರ್ ಗೆ ಹೋಗಲು ಒಂದು ಹೆಜ್ದೆ ಮುಂದಿಟ್ಟಾಗ ತಲೆತಿರುಗಿದಂತಾಗಿದ್ದು, ಛೇ ಇಲ್ಲಿಯವರೆಗೂ ಏನೂ ಇರಲಿಲ್ಲ. ಮಾತ್ರೆಯ ನೆನಪಾದ ತಕ್ಷಣ ತಲೆ ತಿರುಗುವಂತಾಗುತ್ತಿದೆಯಲ್ಲಾ ಎಂದುಕೊಂಡು ನಿಧಾನವಾಗಿ ಮೆಡಿಕಲ್ ಅಂಗಡಿಗೆ ಹೋಗಿ ತಾವು ತೆಗೆದುಕೊಳ್ಳುತ್ತಿದ್ದ ಮಾತ್ರೆಯ ಹೆಸರು ಹೇಳಿ, ಎರಡು ಮಾತ್ರೆ ಕೊಡಲು ಕೇಳಿದಾಗ ಅಂಗಡಿಯವ ರೀ ಯಜಮಾನ್ರೇ ಇದನ್ನು ಕಟ್ ಮಾಡಿ ಕೊಡಲು ಬರುವುದಿಲ್ಲ.
ಹದಿನೈದು ಮಾತ್ರೆ ಸ್ಟ್ರಿಪ್ ಪೂರ್ತಾ ತೆಗೆದುಕೊಳ್ಳಬೇಕು ಎನ್ನಲು, ನಮ್ಮ ಮನೆಯಲ್ಲಿ ತಿಂಗಳಿಗಾಗುವಷ್ಟು ನನ್ನ ಮಗ ಖರೀದಿಸಿ ತರುತ್ತಾನೆ. ನಿನ್ನೆ ರಾತ್ರಿಯೂ ಮಾತ್ರೆ ತೆಗೆದುಕೊಳ್ಳುವುದನ್ನು ಮರೆತಿದ್ದೇನೆ ದಯವಿಟ್ಟು ಒಂದೇ ಒಂದು ಮಾತ್ರೆ ಕೊಡಪ್ಪಾ ಸಾಕು.ನನ್ನಲ್ಲಿ ಹಣ ಇರುವುದು ಬಹಳ ಕಡಿಮೆ. ಊರಿಗೆ ಹೋಗಲು ಬಸ್ ಚಾರ್ಜ್ ಮಾತ್ರ ಇದೆ ಎಂದು ಎಷ್ಚು ಕೇಳಿದರೂ ಅಂಗಡಿಯವನಿಗೆ ಕರುಣೆ ಬರುವುದೇ ಇಲ್ಲ. ಇದನ್ನು ಚಿಲ್ಲರೆಯಾಗಿ ಮಾರಿದರೆ ನಮ್ಮ ತಂದೆ ಬೈಯ್ಯುತ್ತಾರೆ ಎನ್ನುತ್ತಾನೆ. ಹೋಗಲಿ ಕೊಡಪ್ಪಾ ಎಂದು ಹೇಳಿ ತಮ್ಮ ಜೇಬಿನಲ್ಲಿದ್ದ ಹಣವನ್ನು ಕೊಟ್ಟು ಹದಿನೈದು ಮಾತ್ರೆ ಗಳಿರುವ ಸ್ಟ್ರಿಪ್ ತೆಗೆದುಕೊಂಡು, ಅದರಲ್ಲಿ ಒಂದು ಮಾತ್ರೆ ತೆಗೆದುಕೊಂಡು ನೀರು ಇದೆಯಾ ಎಂದು ಅಂಗಡಿಯವನನ್ನು ಕೇಳಿದಾಗ ಈ ಸೇವೆಯನ್ನು ಮಾಡಬೇಕಾ? ಎಂದು ಸಿಡುಕುತ್ತಾ ತೆಗೆದುಕೋ ಎಂದಾಗ ಪರ್ವತಯ್ಯನವರು ನೀರಿನ ಬಾಟಲ್ ಪಡೆದು, ಮಾತ್ರೆಯನ್ನು ಬಾಯಲ್ಲಿ ಹಾಕಿ ನೀರು ಕುಡಿದು, ನೀರಿನ ಬಾಟಲ್ ಅಂಗಡಿಯವನಿಗೆ ಕೊಡುವಷ್ಟರಲ್ಲಿ, ದೂರದಿಂದ ತಮ್ಮೂರಿನ ಬಸ್ ಬರುತ್ತಿರುವುದನ್ನು ನೋಡಿ, ಉಳಿದ ಮಾತ್ರೆಯ ಸ್ಟ್ಕಿಪ್ಪನ್ನು ಜೇಬಿನಲ್ಲಿ ಇಟ್ಟುಕೊಂಡು, ಹಣ ಎಷ್ಟಿದೆ ಎಂದು ನೋಡಲು ಕೇವಲ ಹನ್ನೆಕಡು ರೂಪಾಯಿ ಮಾತ್ರ ಇರುತ್ತದೆ. ಅಯ್ಯೋ ಬಸ್‌ಗೆ ಎಪ್ಪತ್ತು ರೂಪಾಯಿ ಕೊಡಬೇಕು ಹನ್ನೆರಡು ರೂಪಾಯಿ ಇದೆ ಉಳಿದ ಹಣಕ್ಕೆ ಏನು ಮಾಡುವುದೆಂದು ದಿಕ್ಕೇ ತೋಚದೆ,ತಕ್ಷಣ ಅಂಗಡಿಯವನ ಬಳಿ ಬಂದು ತನ್ನ ಕಷ್ಟ ಹೇಳಿಕೊಂಡಾಗ ನಾನು ಎರಡು ಮಾತ್ರೆ ಕೊಡದೇ ಇದ್ದದ್ದಕ್ಕೆ ಪೂರ್ತಿ ತೆಗೆದುಕೊಂಡು ಅದರಲ್ಲಿ ಒಂದು ಮಾತ್ರೆ ನುಂಗಿ ಉಳಿದಿದ್ದನ್ನು ನನಗೇ ವಾಪಸ್ ಕೊಡಲು ನಾಟಕವಾಡುತ್ತಿದ್ದೀರಾ ಎಂದು ಕೋಪದಿಂದ ಕೇಳಿದಾಗ, ಇಲ್ವಪ್ಪಾ, ನನಗೆ ಎಂಬತ್ತು ವರ್ಷ ವಯಸ್ಸಾಗಿದೆ ನಾನೇಕೆ ಸುಳ್ಳು ಹೇಳಲಿ? ಖಂಡಿತಾ ನನ್ನ ಬಳಿ ಹಣ ವಿಲ್ಲಪ್ಪಾ ಎಂದು ಎಷ್ಟು ಹೇಳಿದರೂ ಅಂಗಡಿಯವನು ಕೇಳಲು ತಯಾರಿರುವುದಿಲ್ಲ. ನಿಮ್ಮಂಥಹವರನ್ನು ಬಾಳಾ ಜನರನ್ನು ನೋಡಿದ್ದೇನೆ ಹೋಗ್ರೀ ಹೋಗ್ರೀ ಎಂದು ಹೇಳಿ ತನ್ನ ಕೆಲಸದಲ್ಲಿ ನಿರತನಾಗುತ್ತಾನೆ.
ಆ ವೇಳೆಗೆ ಬಸ್ ಹೊರಟು ಹೋಗುತ್ತದೆ. ಅಯ್ಯೋ ಬಸ್ ಹೊರಟು ಹೋಯಿತು, ಇನ್ನೂ ಒಂದು ಗಂಟೆ ಕಾಯಬೇಕಲ್ಲಾ ಎಂದುಕೊಂಡು ಅಂಗಡಿಯ ಪಕ್ಕದಲ್ಲೇ ನಿಲ್ಲುತ್ತಾರೆ. ಆ ವೇಳೆಗೆ ಅಂಗಡಿಯ ಯಜಮಾನ ಬಂದು ತಾನೂ ಕೂಡಾ ಮಾತ್ರೆ ನೀಡುವ ಕೆಲಸ ಮಾಡುತ್ತಿದ್ದು, ಅಂಗಡಿಗೆ ಬಂದ ಅನೇಕರು ಔಷದಿ ಮಾತ್ರೆಗಳನ್ನು ಖರೀದಿಸಿ ಹೋಗುತ್ತಿರುವುದನ್ನೇ ಪರ್ವತಯ್ಯನವರು ನೋಡುತ್ತಿದ್ದು, ಆಗಲೇ ಅರ್ಧಗಂಟೆ ಕಳೆದು ಹೋಗುತ್ತದೆ.
ತಮ್ಮ ಬಳಿಯಿದ್ದ ಕೈ ಗಡಿಯಾರವನ್ನು ನೋಡಿಕೊಂಡು ಇನ್ನೇನು ಬಸ್ ಬರುತ್ತದೆಯಲ್ಲಾ, ಹಣ ಹೊಂದಿಸದಿದ್ದರೆ ಆ ಬಸ್ ಕೂಡಾ ಮಿಸ್ ಆಗುತ್ತದೆ. ಈಗೇನು ಮಾಡಲಿ ಎಂದು ಚಡಪಡಿಸುತ್ತಾ, ತನ್ನ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ, ಏನಪ್ಪಾ ಬೇಡವೆಂದರೂ ಒಬ್ಬೊಬ್ಬನೇ ಹೋಗುತ್ತೀಯಾ, ಈಗ ನೋಡು ಎಂತಹ ಇಕ್ಕಟ್ಟಿಗೆ ಸಿಲುಕಿದ್ದೀಯಾ? ಅಂಗಡಿಯವರಿಗೆ ಕೊಡು ನಾನು ಮಾತನಾಡುತ್ತೇನೆ ಎಂದಾಗ,
ತಕ್ಷಣ ಅಂಗಡಿಯ ಹುಡುಗನಿಗೆ ತಮ್ಮ ಮೊಬೈಲ್ ನೀಡಿ ನೋಡಪ್ಪಾ ನನ್ನ ಮಗ ಮಾತನಾಡುತ್ತಿದ್ದಾನೆ ಎನ್ನಲು ಆ ಅಂಗಡಿಯ ಹುಡುಗ ಮೊಬೈಲ್ ತೆಗೆದುಕೊಂಡು ಹಲೋ ಎನ್ನಲು. ಪರ್ವತಯ್ಯನವರ ಮಗ ತನ್ನಪ್ಪ ಹೇಳಿದ ವಿಷಯವನ್ನು ತಿಳಿಸಿದಾಗ ಇವೆಲ್ಲಾ ನಾಟಕ ಬೇಡಾ ರೀ ಒಂದು ಮಾತ್ರೆ ಬಳಸಿ ಕಟ್ ಮಾಡಿದ ಮಾತ್ರೆಯ ಸ್ಟ್ರಿಪ್ ನಾವು ತೆಗೆದುಕೊಳ್ಳುವುದಿಲ್ಲವೆಂದು ನಿಷ್ಠೂರವಾಗಿ ಹೇಳಲು ಪರ್ವತಯ್ಯನವರು ಪೆಚ್ಚು ಮೋರೆ ಹಾಕಿಕೊಂಡು ನಿಂತಿರುವಾಗ ಅಂಗಡಿಯ ಮಾಲೀಕನು ಇವರೇಕೆ ನಿಂತಿದ್ದಾರೆ? ಎನ್ನಲು ಆ ಹುಡುಗ ನಡೆದ ವಿಷಯ ತಳಿಸಿದಾಗ ಹೌದು ಯಜಮಾನ್ರೇ ಕಟ್ ಮಾಡಿದ ಸ್ಟ್ರಿಪ್ ಯಾರೂ ತೆಗೆದುಕೊಳ್ಳುವುದಿಲ್ಲವೆನ್ನುತ್ತಾರೆ. ಒಂದೆರಡು ಸಲ ಪರ್ವತಯ್ಯನವರು ದೈನ್ಯತೆಯಿಂದ ಕೇಳಿದಾಗ ಯಾವ ಮಾತ್ರೇನೋ ಅದೂ ಎಂದು ಕೇಳಲು ಪರ್ವತಯ್ಯನವರು ತಮ್ಮ ಜೇಬಿನಲ್ಲಿದ್ದ ಮಾತ್ರೆಯ ಸ್ಟ್ರಿಪ್ ಕೊಟ್ಟಾಗ ಓ ಇದೇನೋ ಯಜಮಾನ್ರೇ ಇದು ಒಂದು ಸ್ಟ್ರಿಪ್ ಎಪ್ಪತ್ತು ರೂಪಾಯಿ ಆಗುತ್ತದೆ, ಇದನ್ನು ಕಟ್ ಮಾಡಿ ಮಾರಿದರೆ ನಮಗೇ ಲಾಸ್ ಆಗುತ್ತದೆ ಎನ್ನುತ್ತಿರುವಾಗ, ಅವರ ಮೊಬೈಲ್ ರಿಂಗ್ ಆದಾಗ, ಅದನ್ನು ರಿಸೀವ್ ಮಾಡಿ, ಹಲೋ ಎನ್ನಲು ಅವರ ಪತ್ನಿ ಮಾತನಾಡಿ, ಮಾತ್ರೆಯ ಹೆಸರು ಹೇಳಿ ಮಾತ್ರೆ ಮುಗಿದು ಹೋಗಿದೆ ಬರುವಾಗ ತೆಗೆದುಕೊಂಡು ಬನ್ನಿ ಎಂದು ಹೇಳಿ ಫೋನ್ ಆಫ್ ಮಾಡಲು ಅಂಗಡಿಯ ಮಾಲೀಕ ತನ್ನ ಮಗನಿಗೆ ಮಾತ್ರೆಯ ಹೆಸರು ಹೇಳಿ ಈ ಮಾತ್ರೆಯ ಬಾಕ್ಸ್ ತೆಗೆದುಕೊಂಡು ಬಾ ಎನ್ನಲು ಅವರ ಮಗ ಬಾಕ್ಸಿನಲ್ಲಿ ಹುಡುಕಿದಾಗ, ಮಾತ್ರೆ ಇರುವುದಿಲ್ಲ, ಅಪ್ಪಾ ಮಾತ್ರೆ ಮುಗಿದು ಹೋಗಿದೆ ಬೇರೆ ಸ್ಟೋರಿನಲ್ಲಿ ತೆಗೆದುಕೊಂಡು ಬರಲಾ ಎನ್ನಲು ಥೂ ನಿನ್ನಾ,,, ನಾಚಿಕೆಯಾಗುವುದಿಲ್ಲವಾ ನಿನಗೆ? ಸ್ಟಾಕ್ ಮುಗಿದ ತಕ್ಷಣ ಹೇಳಬೇಕೆಂದು ಜ್ಞಾನ ಇಲ್ಲವಾ ಎಂದು ರೇಗಿದಾಗ ಈಗಲೇ ಫೋನ್ ಮಾಡಿ ಹೇಳುತ್ತೇನೆ ಎನ್ನುತ್ತಾನೆ.
ಈಗ ಆ ಮಾತ್ರೆ ಅರ್ಜಂಟಾಗಿ ಬೇಕು ಈಗೇನು ಮಾಡುತ್ತೀಯಾ ಎಂದು ಅಂಗಡಿ ಮಾಲೀಕ ಗದರಿದಾಗ
ಅಪ್ಪಾ ಇಲ್ಲಿ ನಿಂತಿದ್ದರಲ್ಲಾ ಅವರಿಗೆ ಈ ಮಾತ್ರೆಯನ್ನು ಕೊಟ್ಚಿದ್ದೆ ಅದನ್ನು ವಾಪಸ್ ಪಡೆಯಲಾ ಎಂದು ಕೇಳಲು
ಆಯ್ತು ಹೋಗು ಅವರಿಗೂ ಸಹಾಯವಾಗುತ್ತದೆಂದು ಹೇಳಲು
ತಕ್ಷಣ ಆ ಹುಡುಗ ಹೊರಗೆ ಬಂದು ಅಕ್ಕ ಪಕ್ಕ ನೋಡಿದಾಗ
ಪರ್ವತಯ್ಯನವರು ಅಲ್ಲೆಲ್ಲೂ ಇರುವುದಿಲ್ಲ. ಸಾರೀ ಅಪ್ಪಾ ಆ ಯಜಮಾನರು ಎಲ್ಲೂ ಇಲ್ಲಾ, ಬೇರೆ ಸ್ಟೋರಿನಲ್ಲಿ ತಂದುಕೊಡಲಾ ? ಎಂದು ಕೇಳಿದ ತಕ್ಷಣ
ಅಂಗಡಿ ಮಾಲೀಕನಿಗೆ ತಡೆಯಲಾರದ ಕೋಪ ಬರುತ್ತದೆ. ಈಗಲೇ ತೊಲಗಿ ಹೋಗಿ ತೆಗೆದುಕೊಂಡು ಬಾ ಎಂದು ಮಾಲೀಕ ಕೋಪದಿಂದ ಹೇಳಲು,
ತಕ್ಷಣ ಅವರ ಮಗ ಪಕ್ಕದ ಅಂಗಡಿಗೆ ಹೋಗಿ ಮಾತ್ರೆಯ ಹೆಸರು ಹೇಳಿ ಒಂದು ಸ್ಟ್ರಿಪ್ ಕೊಡಿರೆಂದು ಕೇಳಲು
ಆ ಅಂಗಡಿಯವನೂ ಸಹ ಬಾಕ್ಸ್ ನಲ್ಲಿ ಹುಡುಕಿದರೂ ಆ ಅಂಗಡಿಯಲ್ಲೂ ಸ್ಟಾಕ್ ಮುಗಿದಿರುತ್ತದೆ.
ಇಲ್ಲಾ ಕಣಪ್ಪಾ ಬೇರೆ ಅಂಗಡಿಗೆ ಹೋಗು ಎಂದು ಹೇಳಿದಾಗ, ಆ ಹುಡುಗ ಸುತ್ತ ಮುತ್ತಲಿನ ಅಂಗಡಿಗಳಲ್ಲೆಲ್ಲಾ ಹುಡುಕಿದರೂ ಎಲ್ಲೂ ಸಿಗುವುದಿಲ್ಲ.
ಕಡೆಗೆ ಸ್ವಲ್ಪ ದೂರದ ಅಂಗಡಿಗೆ ಹೋಗಿ ಕೇಳಲು ಇವನ ಗ್ರಹಚಾರಕ್ಕೆ ಅಲ್ಲೂ ಇರುವುದಿಲ್ಲ. ಈಗೇನು ಮಾಡುವುದೆಂದು ಅಲ್ಲೇ ಯೋಚಿಸುತ್ತಾ ನಿಂತಿರುವಾಗ, ಅಂಗಡಿ ಮಾಲೀಕನು ನಿಂತಿದ್ದ ಅಂಗಡಿಯ ಮುಂದಿನ ಬಾಕ್ಸ್ ಮೇಲೆ ಮಾತ್ರೆಯ ಒಂದು ಸ್ಟ್ಕಿಪ್ ಇರುವುದನ್ನು ನೋಡಿ, ಅಣ್ಣಾ ಇಲ್ಲಿರುವ ಮಾತ್ರೆಯನ್ನೇ ಕೊಡಣ್ಣಾ ಎನ್ನಲು.
ಲೇಯ್ ಬೇಡ ಕಣೋ ಅದರಲ್ಲಿ ಒಂದು ಮಾತ್ರೆ ಕಡಿಮೆ ಇದೆ ಎಂದು ಹೇಳಿದ ತಕ್ಷಣ,
ಅಣ್ಣಾ ಈ ಮಾತ್ರೆ ಎಲ್ಲಿಂದಾ ಬಂತು ಎಂದು ಪ್ರಶ್ನಿಸಲು ಅಯ್ಯೋ ಪಾಪ ಒಬ್ಬರು ವಯಸ್ಸಾದವರು ಬಂದಿದ್ದರು. ಅವರು ಯಾವುದೋ ಅಂಗಡಿಯಲ್ಲಿ ಒಂದು ಮಾತ್ರೆ ಕೊಡಲು ಕೇಳಿದರಂತೆ, ಅವನ್ಯಾರೋ ಈಡಿಯಟ್ ಒಂದು ಮಾತ್ರೆ ಕೊಡುವುದಿಲ್ಲ ಬೇಕಾದರೆ ಹದಿನೈದು ಮಾತ್ರೆ ಇರುವ ಸ್ಟ್ರಿಪ್ ತೆಗೆದುಕೊಳ್ಳಲೇ ಬೇಕೆಂದು ಹೇಳಿದನಂತೆ, ಅವರಿಗೆ ತಲೆತಿರುಗುತ್ತಿತ್ತಂತೆ ಪಾಪ ಬಸ್ ಚಾರ್ಜ್ ಗೆ ಇದ್ದ ಹಣವನ್ನೆಲ್ಲಾ ಕೊಟ್ಟು ಖರೀದಿಸಿದರಂತೆ, ಕಡೆಗೆ ಬಸ್ ಚಾರ್ಜ್ ಗೆ ಹಣ ಇಲ್ಲದೆ ಅಂಗಡಿಯವನನ್ನು ವಾಪಸ್ ತೆಗೆದುಕೊಂಡು ಹಣ ಕೊಡಲು ಕೇಳಿದರಂತೆ, ಆ ಕಟುಕನಿಗೆ ಮನಸ್ಲು ಕರಗಲೇ ಇಲ್ಲವಂತೆ, ಮಾತ್ರೆ ವಾಪಸ್ ಪಡೆಯಲು ನಾಟಕವಾಡುತ್ತಿದ್ದೀಯಾ ಎಂದು ಹೇಳಿದನಂತೆ, ಎಲ್ಲಾ ಅಂಗಡಿಯಲ್ಲೂ ಹೋಗಿ ಕೇಳಿದರೂ ಯಾರೂ ಕೂಡಾ ವಾಪಸ್ ತೆಗೆದುಕೊಂಡು ಹಣ ಕೊಡಲಿಲ್ಲವಂತೆ, ಕಡೆಗೆ ನನ್ನ ಬಳಿ ಬಂದು ಅವರ ಕಷ್ಟ ಕೇಳಿಕೊಂಡರು. ವಯಸ್ಸಾದ ಹಿರಿಯರು ಬಂದು ಕೇಳಿದಾಗ, ನನಗೆ ಅವರನ್ನು ನೋಡಿ ಮನಸ್ಸು ಕರಗಿತು. ನನಗೆ ನಷ್ಟವಾದರೂ ಚಿಂತೆಯಿಲ್ಲವೆಂದುಕೊಂಡು ಅವರಿಂದ ಮಾತ್ರೆ ಪಡೆದು ಹಣ ಕೊಟ್ಟಾಗ, ಆ ಹಿರಿಯರ ಮುಖದಲ್ಲಿ ಮಂದಹಾಸ ಮೂಡಿ ನನಗೆ ಒಳ್ಳೆಯದಾಗಲೆಂದು ಹರಸಿದಾಗ ನನಗೆ ತುಂಬಾ ಸಂತೋಷವಾಯಿತು. ನಾವು ಲಕ್ಷಾಂತರ ರೂಪಾಯಿ ಹಣದ ವ್ಯಾಪಾರ ಮಾಡುತ್ತೇವೆ. ಕೇವಲ ನೂರು ಇನ್ನೂರು ಮುಖ ನೋಡಬಾರದು ಎಂದ ತಕ್ಷಣ ಆ ಹುಡುಗ ಗಳ ಗಳನೆ ಅಳುತ್ತಾ, ಅಣ್ಣಾ ನನ್ನದು ತಪ್ಪಾಯ್ತಣ್ಣಾ ಎನ್ನುತ್ತಾನೆ.
ಯಾಕೋ ಏನೋಯ್ತೋ ಎಂದು ಅಂಗಡಿಯವರು ಕೇಳಲು ನಾನೇ ಕಣಣ್ಣಾ ಆ ಪಾಪಿ, ಆ ವಯಸ್ಸಾದ ಹಿರಿಯರನ್ನು ಅವಮಾನಿಸಿ ಕಳುಹಿಸಿದ್ದು ಎಂದು ಹೇಳಿದಾಗ, ಅಂಗಡಿಯವನಿಗೆ ಕೋಪ ಬಂದರೂ ತಡೆದುಕೊಂಡು ಆಯ್ತು ಬಿಡು ಇನ್ನು ಮುಂದಾದರೂ ಆ ರೀತಿ ಮಾಡಬೇಡ ಹಿರಿಯರೆಂದರೆ ಗೌರವ ಕೊಡು ದೇವರು ಮೆಚ್ಚುತ್ತಾನೆ ಎಂದು ಹೇಳಿ ಕಳುಹಿಸುತ್ತಾರೆ.
ಡಾ. ಎನ್.ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ

ಹಿರಿಯರಿಗೆ ಬೆಲೆಯನ್ನು ಕೊಡಬೇಕು ಮೊದಲಿಗೆ ಹಾಗಿದ್ದಾಗ ಮಾತ್ರ ಜೀವನಕ್ಕೊಂದು ಅರ್ಥ ಸಿಗುತ್ತದೆ.